

ಕುಷ್ಟಗಿ: ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಒಂದು ತಾಸಿನ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಸಿದ್ದೇಶಗೆ ಮನವಿ ಸಲ್ಲಿಸಿದರು.
ನ್ಯಾಯಸಮ್ಮತ ಬೇಡಿಕೆ ಈಡೇರಿಸುವಂತೆ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ, ಉನ್ನತ ಮಟ್ಟದ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಈ ಸಂಬಂಧ ಸೆ.24ರಿಂದ ಮನೆಯಲ್ಲಿಯೇ ಅನಿರ್ಧಿಷ್ಟಾವಧಿ ಧರಣಿ ನಡೆಸಿದೆವು. ಸದ್ಯ ತಹಸಿಲ್ ಕಚೇರಿ ಆವರಣದಲ್ಲಿ ಒಂದು ತಾಸಿನ ಶಾಂತಿಯುತ ಪ್ರತಿಭಟನೆ ನಡೆಸಿ ಅ.9ರವರೆಗೆ ಮುಂದುವರಿಸುತ್ತಿದ್ದೇವೆ. ಕೋವಿಡ್ 19 ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತ ಕ್ರಮ ಅನುಸರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಕೂಡಲೇ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಿದೆ ಎಂದು ಆಗ್ರಹಿಸಿದರು.
ನೌಕರರಾದ ಪ್ರೇಮಾ, ಬೀರಪ್ಪ, ಪ್ರಶಾಂತ, ಸನ್ಮತಿ, ರತ್ನಾ, ಶಂಕರಗೌಡ, ಅಮರೇಶ, ಬಸವರಾಜ, ನಾಗರತ್ನಾ, ಗವಿಸಿದ್ದಪ್ಪ, ಸವಿತಾ, ಮಂಜುನಾಥ ಇತರರು ಪಾಲ್ಗೊಂಡಿದ್ದರು.