

ಕುಷ್ಟಗಿ: ರಸ್ತೆ ಅಭಿವೃದ್ಧಿಪಡಿಸಲು ಭೂಮಿಪೂಜೆ ನೆರವೇರಿಸಿ ಏಳು ತಿಂಗಳು ಗತಿಸಿದೆ. ಈಗಲೂ ಕಂಕರ್ (ಕಲ್ಲು) ಗಳ ಮೇಲೆ ಕುಂಟುತ್ತ ಓಡಾಡುವುದು ತಪ್ಪಿಲ್ಲ!.
ಇದು ಪಟ್ಟಣದ ಕಂದಕೂರು ಜ್ಯುವೆಲರ್ಸ್ ಪಕ್ಕದ ರಸ್ತೆಯ ಸ್ಥಿತಿ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡಿದೆ. ಕಳೆದ ಮಾ.16ರಂದು ಕಾಮಗಾರಿಯ ಭೂಮಿಪೂಜೆ ನೆರವೇರಿಸಲಾಯಿತು. ಒತ್ತುವರಿ ತೆರವುಗೊಳಿಸುವ ಸಂಬಂಧ ಆರಂಭಗೊಂಡಿದ್ದ ಕಾಮಕಾರಿ ಸ್ಥಗಿತಗೊಂಡಿತ್ತು. ತೆರವು ಕಾರ್ಯಾಚರಣೆ ಪೂರ್ಣಗೊಂಡು ಹಲವು ದಿನ ಗತಿಸಿವೆ.
ಕಾಮಗಾರಿಗೆಂದು ರಸ್ತೆ ಅಗೆದು ಕೈಬಿಟ್ಟಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿ ಜನ ಪರದಾಡುವಂತಾಗಿತ್ತು. ಜನರ ಒತ್ತಡಕ್ಕೆ ಮಣಿದ ಲೋಕೋಪಯೋಗಿ ಇಲಾಖೆ, 10ದಿನಗಳ ಹಿಂದೆ ರಸ್ತೆಗೆ ಕಂಕರ್ ಸುರಿದು ಸುಮ್ಮನಾಗಿದೆ.
ಬಸ್ ನಿಲ್ದಾಣ ರಸ್ತೆಯಿಂದ ಬಿಬಿ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಜನ ವಿಧಿ ಇಲ್ಲದೆ ಕಲ್ಲುಗಳ ಮೇಲೆ ಓಡಾಡುವಂತಾಗಿದೆ. ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಲೋಕೋಪಯೋಗಿ ಇಲಾಖೆಯ ಎಇಇ ಸುಧಾಕರಗೆ ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.