ಜೂ.19ರಿಂದ ಕುಷ್ಠರೋಗ ಪತ್ತೆ ಆಂದೋಲನ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

1 (4)
Published on

ಮಂಡ್ಯ: ಆರೋಗ್ಯ ಇಲಾಖೆ ವತಿಯಿಂದ ಜೂ.19ರಿಂದ ಜು.6ರವರೆಗೆ ಜಿಲ್ಲೆಯಲ್ಲಿ ಕುಷ್ಠ ರೋಗ ಪತ್ತೆ ಹಚ್ಚುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಷ್ಠರೋಗ ಸಮಾಜದ ಪಿಡುಗಾಗಿದ್ದು, ಅದನ್ನು ಪತ್ತೆ ಹಚ್ಚಿ ಅಗತ್ಯ ಚಿಕಿತ್ಸೆ ನೀಡಲು ಆಂದೋಲನ ನಡೆಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತೆಯರು ಜಿಲ್ಲೆಯ ಪ್ರತಿ ಮನೆಗೆ ಭೇಟಿ ನೀಡಿ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಸಾರ್ವಜನಿಕರು ಆರೋಗ್ಯ ಕಾರ್ಯಕರ್ತೆಯರಿಗೆ ನಿಖರ ಮಾಹಿತಿ ನೀಡಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ವೈದ್ಯರು ಪರೀಕ್ಷಿಸಿ ಉತ್ತಮ ಚಿಕಿತ್ಸೆ ನೀಡಲಿದ್ದಾರೆ ಎಂದು ಹೇಳಿದರು.

ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ರೋಗದ ಲಕ್ಷಣಗಳ ಬಗ್ಗೆ ಅರಿವು ಮೂಡಿಸಬೇಕು. ಅಂತೆಯೇ ಅಂಗನವಾಡಿ ಕಾರ್ಯಕರ್ತೆಯರು ತಾವು ಕಾರ್ಯನಿರ್ವಹಿಸುವ ಸ್ಥಳದ ವ್ಯಾಪ್ತಿಯಲ್ಲಿ ಆಂದೋಲನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮಾತನಾಡಿ, ಕುಷ್ಠ ರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಇಲಾಖೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ದೇಹದ ಮೇಲೆ ಯಾವುದೇ ರೀತಿಯ ಮಚ್ಚೆಗಳಿದ್ದಲ್ಲಿ ಮಾಹಿತಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ. 2030ರ ವೇಳೆಗೆ ಕುಷ್ಠರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು, ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಪೌರಾಯುಕ್ತ ಮಂಜುನಾಥ್, ಡಾ.ರವೀಂದ್ರ ಬಿ.ಗೌಡ, ಸಿದ್ದಲಿಂಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net