ಬೆಚ್ಚನೆ ಗೂಡು ಈ ಕೂಸಿನ ಮನೆ

kusina
Published on

 ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ದುಡಿಯುವ ವರ್ಗದ ಮಹಿಳೆಯರ ಮೂರು ವರ್ಷದೊಳಗಿನ ಕಂದಮ್ಮಗಳು ಸುರಕ್ಷತೆ ಹಾಗೂ ಪೂರಕ ಪೌಷ್ಠಿಕ ಆಹಾರದೊಂದಿಗೆ ಬೆಚ್ಚಗಿನ ವಾತಾವರಣದಲ್ಲಿ ಬೆಳೆಯುವ ಅವಕಾಶ ಕಲ್ಪಿಸಿಕೊಟ್ಟಿರುವ ಜಿಲ್ಲಾ ಪಂಚಾಯಿತಿ ಕೂಸಿನ ಮನೆಯೆಂಬ ಪರಿಕಲ್ಪನೆ ಮೂಲಕ ಆಸರೆ ನೀಡಿದೆ. ಇದರಿಂದಾಗಿ ತಾಯಂದಿರು ನಿಶ್ಚಿಂತೆಯಿಂದ ನರೇಗಾ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.

ದುಡಿಯುವ ಗ್ರಾಮೀಣ ಮಹಿಳೆಯರ ಕಷ್ಟವನ್ನು ಮನಗಂಡ ರಾಜ್ಯ ಸರ್ಕಾರ 2023 ರಲ್ಲಿ ದುಡಿವ ಮಹಿಳೆಯರ ನೆರವಿಗಾಗಿ ಕೂಸಿನ ಮನೆಗಳನ್ನು ಆರಂಭಿಸಿತು. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿಯೂ ಕೂಸಿನ ಮನೆಗಳ ಯೋಜನೆ ಅನುಷ್ಠಾನಗೊಳ್ಳಲಾರಂಭಿಸಿತು ಪ್ರಸ್ತುತ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕೂಸಿನ ಮನೆ ಕಾರ್ಯನಿರ್ವಹಿಸುತ್ತಿದ್ದು ದುಡಿಯುವ ವರ್ಗದ ಮಹಿಳೆಯರ ಮಕ್ಕಳಿಗೆ ಆಸರೆಯಾಗಿದೆ.

6 ತಿಂಗಳಿಂದ ಮೂರುವರ್ಷವರೆಗಿನ ಮಕ್ಕಳು: ರಾಜ್ಯ ಸರ್ಕಾರ ರಾಜ್ಯದ 4 ಸಾವಿರ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕೂಸಿನ ಮನೆಗಳನ್ನು ಮುನ್ನೆಡೆಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿರುವ 79 ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆಗಳನ್ನು ಆರಂಭಿಸಲಾಗಿದ್ದು 6 ತಿಂಗಳಿನಿಂದ 3 ವರ್ಷದ ವರೆಗಿನ ಮಕ್ಕಳು ಇದರ ಆಸರೆ ಪಡೆದಿದ್ದಾರೆ. ದೇವನಹಳ್ಳಿ ತಾಲೂಕಿನಲ್ಲಿ 18, ದೊಡ್ಡ ಬಳ್ಳಾಪುರ 22, ಹೊಸಕೋಟೆ 22 ಮತ್ತು ನೆಲಮಂಗಲದಲ್ಲಿ 17 ಕೂಸಿನ ಮನೆಗಳು ಕಾರ್ಯನಿರ್ವಹಿಸುತ್ತಿವೆ.

ಮಹಿಳೆಯರೇ ಕೇರ್‌ಟೇಕರ್ ನರೇಗ ಕೂಲಿ ಕಾರ್ಮಿಕರಲ್ಲಿ ಉದ್ಯೋಗ ಚೀಟಿ ಹೊಂದಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವ ಮಹಿಳೆಯರಲ್ಲಿ 25 ವರ್ಷ ಮೇಲ್ಪಟ್ಟ ಹಾಗೂ 45 ವರ್ಷದೊಳಗಿನ ಮಹಿಳೆಯರನ್ನೇ ಕೇರ್ ಟೇಕರ್ಸ್ ಗಳನ್ನಾಗಿ ಆಯ್ಕೆ ಮಾಡಲಾಗುತ್ತದೆ.ಇದರಿಂದ ದುಡಿಯುವ ವರ್ಗದ ಮಕ್ಕಳ ಲಾಲನೆ ಪಾಲನೆ ಜತೆಗೆ ಶಿಕ್ಷಣವನ್ನೂ ನೀಡುವ ಸವಲತ್ತು ದೊರೆಕಿದಂತಾಗಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 3.30 ರವರಗೆ ಕೂಸಿನ ಮನೆ ಅವಧಿಯಾಗಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಇಬ್ಬರು ಆರೈಕೆದಾರರಿಗೆ ತಾಲೂಕು ಹಂತದಲ್ಲಿ 7 ದಿನಗಳ ತರಬೇತಿಯಲ್ಲಿ ಮಕ್ಕಳ ಆರೈಕೆ ವಿಧಾನ, ಆಹಾರ ತಯಾರಿಕೆ, ಶುಚಿತ್ವ ಹಾಗೂ ಕ್ರಿಯಾಶೀಲ ಚಟುವಟಿಕೆಗಳ ತರಬೇತಿ ನೀಡಲಾಗಿರುತ್ತದೆ. ಗೌರವ ಧನವಾಗಿ ನರೇಗಾ ಕೂಲಿಯಂತೆ ಪ್ರತಿದಿನಕ್ಕೆ ತಲಾ 370 ರಂತೆ ಪಾವತಿಸಲಾಗುತ್ತದೆ.

1211 ಮಕ್ಕಳು ದಾಖಲು: ಮಕ್ಕಳಿಗೆ ಸಮತೋಲಿತ ಆಹಾರವಾಗಿ ಬೆಳಗ್ಗೆ 10,30 ಕ್ಕೆ ಹಾಲು ಮತ್ತು ಬೆಲ್ಲದ ಪೌಡರ್ ನೀಡಲಾಗುತ್ತದೆ. ಮಧ್ಯಾಹ್ನ 1,30ಕ್ಕೆ ದಾಲ್ ಕಿಚಡಿ ಹಾಗೂ ಮಧ್ಯಾಹ್ನ 3 ಗಂಟೆಗೆ ನ್ಯೂಟ್ರಿ ಮಿಕ್ಸ್ ಲಾಡು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ 1211 ಮಕ್ಕಳು ಕೂಸಿನ ಮನೆಗೆ ದಾಖಲಾಗಿವೆ. ಕೂಸಿನ ಮನೆಯಿಂದಾಗಿ ಮಕ್ಕಳ ಮಾನಸಿಕ ಹಾಗೂ ಬೌದ್ದಿಕ ಅಭಿವೃದ್ಧಿಯೊಂದಿಗೆ ಮಕ್ಕಳ ಕ್ರಿಯಾಶೀಲ ಬೆಳವಣಿಗೆ ಆಗಲಿದೆ. ಮಕ್ಕಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳ ಸ್ನೇಹಿ ಬರಹಗಳು: ಕೂಸಿನ ಮನೆಗಳ ಗೋಡೆಗಳ ಮೇಲೆ ಮಕ್ಕಳ ಸ್ನೇಹಿ ಬರಹಗಳು, ಚಿತ್ರಗಳು, ಆಟಿಕೆಗಳು ಮಕ್ಕಳಿಗೆ ಮುದ ನೀಡಲಿವೆ. ಒಂದು ಕೇಂದ್ರದಲ್ಲಿ ಗರಿಷ್ಠ 25 ಮಕ್ಕಳ ದಾಖಲಾತಿಗೆ ಅವಕಾಶವಿದೆ. ಕೂಸಿನ ಮನೆಗಳ ನಿರ್ವಹಣೆಗೆ ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಿತಿಗಳಿರುತ್ತವೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಿತಿಗಳಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷರು ಕೂಸಿನ ಮನೆಯ ಅಧ್ಯಕ್ಷರಾಗಿರುತ್ತಾರೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದು, ಇತರೆ 9 ಮಂದಿ ಸರ್ಕಾರಿ ಹಾಗೂ ಸರ್ಕಾರೇತರ ಸದಸ್ಯರಾಗಿರುತ್ತಾರೆ. ಈ ಸಮಿತಿ ಎಲ್ಲ ಕೇರ್ ಟೇಕರ್ಸ್‌ಗಳಿಗೆ ತರಬೇತಿ ನೀಡಿದ ಬಗ್ಗೆ ಖಾತ್ರಿ ಪಡಿಸಿಕೊಳ್ಳುತ್ತದೆ ಮತ್ತು ಸ್ಥಳೀಯ ಆಹಾರ ಪದ್ದತಿಯನ್ನು ಆಧರಿಸಿ ಜಿಲ್ಲಾ ಸಮಿತಿಗೆ ಶಿಫಾರಸು ಮಾಡುತ್ತದೆ.

ನರೇಗಾ ಸೇರಿ ಇತರೆ ಗ್ರಾಮೀಣ ಉದ್ಯೋಗಗಳಲ್ಲಿ ಕೆಲಸಗಳಲ್ಲಿ ದುಡಿಯುವ ಮಹಿಳೆಯರ ನೆರವಿಗೆ ಬಂದಿರುವ ಸರ್ಕಾರ ಮಹಿಳೆಯರು ದುಡಿಯುವ ಸ್ಥಳಗಳ ಸಮೀಪ ಕೂಸಿನ ಮನೆ ತೆರೆಯುವ ಮೂಲಕ ಗ್ರಾಮೀಣ ಉದ್ಯೋಗಿ ಮಹಿಳೆಯರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ 79 ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ.

ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net