

ಕುಷ್ಟಗಿ: ಬಾಲ್ಯ ವಿವಾಹ ನಡೆಸಲು ಮುಂದಾದಲ್ಲಿ ಪ್ರತಿರೋಧ ಒಡ್ಡಬೇಕು ಎಂದು ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಸಲಹೆ ನೀಡಿದರು.
ವಿಶ್ವ ಹೆಣ್ಣುಮಕ್ಕಳ ದಿನಾಚರಣೆ ನಿಮಿತ್ತ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಶನಿವಾರ ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾನೂನಿನಂತೆ ಗಂಡು ಹಾಗೂ ಹೆಣ್ಣು ಮದುವೆ ವಯಸ್ಸಿಗೆ ಬಂದ ನಂತರವೇ ವಿವಾಹ ಮಾಡಿಸಬೇಕು. ಕುಟುಂಬ ನಿರ್ವಹಣೆ ಹಾಗೂ ಸಂಸಾರದ ಜವಾಬ್ದಾರಿ ನಿಭಾಯಿಸುವ ಶಕ್ತಿ ಇರದ ಅಪ್ರಾಪ್ತರಿಗೆ ಮದುವೆ ಮಾಡಿಸುವುದು ಕಾನೂನು ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ. ಬಾಲ್ಯ ವಿವಾಹ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಶಿಕ್ಷಕರ ಗಮನಕ್ಕೆ ತರುವ ಮೂಲಕ ತಡೆಯಬೇಕಿದೆ. ಸುಶಿಕ್ಷಿತ ಮಹಿಳೆಯರ ಸಂಖ್ಯೆ ಹೆಚ್ಚಬೇಕಿದೆ ಎಂದರು.
ಹಿರಿಯ ನಾಗರಿಕರ ಸಂರಕ್ಷಣೆ ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ವಕೀಲೆ ಸುಭದ್ರಾ ದೇಸಾಯಿ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಎಲ್.ರಾಯನಗೌಡ, ಕಾಲೇಜಿನ ಪ್ರಾಚಾರ್ಯ ಸಿ.ಮಾಲಾ, ವಕೀಲರ ಸಂಘದ ಕಾರ್ಯದರ್ಶಿ ಪರಸಪ್ಪ ಆಡಿನ್ ಇತರರಿದ್ದರು.