ಪತ್ನಿ ಶವ ಆಸ್ಪತ್ರೆಯಲ್ಲಿ ಇರುವಾಗಲೇ ತಂದೆ ಕೊಲೆ: ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳದಲ್ಲಿ ದುರ್ಘಟನೆ

Crime Symbolic
Published on

ಕುಷ್ಟಗಿ: ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ ಶವ ಆಸ್ಪತ್ರೆಯಲ್ಲಿ ಇರುವಾಗಲೇ ಮನೆಯಲ್ಲಿ ಮಲಗಿದ್ದ ತನ್ನ ತಂದೆಯನ್ನು ಕತ್ತು ಹಿಸುಕಿ ಆಕೆಯ ಪತಿ ಕೊಲೆ ಮಾಡಿದ್ದಾನೆ. ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಭೀಮಪ್ಪ ಮುರಡಿ ಎಂಬಾತ ತಂದೆಯ ಕೊಲೆಗೈದ ಆರೋಪಿ. ಹೊಟ್ಟೆ ನೋವು ತಾಳದೆ ಗುರುವಾರ ಸಂಜೆ ತೋಟದ ಮನೆಯಲ್ಲಿ ಭೀಮಪ್ಪನ ಪತ್ನಿ ಮೀನಾಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಶುಕ್ರವಾರ ಪಟ್ಟಣದ ತಾಲೂಕು ಆಸ್ಪತ್ರೆಗೆ ತರಲಾಗಿತ್ತು. ಆಗ ಚಹಾ ಸೇವಿಸಿ ಬರುವುದಾಗಿ ಹೇಳಿಹೊರಟ ಭೀಮಪ್ಪ, ಹಿರೇಬನ್ನಿಗೋಳಕ್ಕೆ ತೆರಳಿ ಮಲಗಿದ್ದ ತನ್ನ ತಂದೆ ದ್ಯಾಮಣ್ಣ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ದ್ಯಾಮಣ್ಣ ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ಕರೆತರಲಾಯಿತು. ಸದ್ಯ ಭೀಮಪ್ಪನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಪತಿಯ ಸಾವಿಗೆ ಕಾರಣನಾದ ಮಗನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭೀಮಪ್ಪನ ತಾಯಿ ಯಲ್ಲವ್ವ ದೂರು ನೀಡಿದ್ದು, ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊಸೆ ಮೀನಾಕ್ಷಿ ಸಾವಿನ ನಂತರ ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಲು ದ್ಯಾಮಣ್ಣ ತೀರ್ಮಾನಿಸಿದ್ದರು. ವಿಷಯ ತಿಳಿದ ಭೀಮಪ್ಪ, ಆಸ್ತಿಯೆಲ್ಲ ತನ್ನ ಮಕ್ಕಳಿಗೇ ಬರುತ್ತದೆ ಎಂಬುದನ್ನೂ ಯೋಚಿಸದೆ, ತಂದೆ ಕೊಲೆ ಮಾಡಿದರೆ ಆಸ್ತಿ ದಕ್ಕಿಸಿಕೊಳ್ಳಬಹುದು ಎಂಬ ದುರಾಸೆಯಿಂದ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net