ಈ ಅಧಿಕಾರಿಗೆ ಪಬ್ಲಿಕ್ ಫೋನ್ ಮಾಡ್ಬಾರ್ದಂತೆ !

EII HOUSE
ಕುಷ್ಟಗಿಯಲ್ಲಿರುವ ಗ್ರಾಮೀಣ ನೀರು-ನೈರ್ಮಲ್ಯ ಇಲಾಖೆ ಕಚೇರಿ.
Published on

ವಿಶ್ವನಾಥ ಸೊಪ್ಪಿಮಠ ಕುಷ್ಟಗಿ

ಪಬ್ಲಿಕ್ ಯಾರೇ ಬಂದು ಕೇಳಿದ್ರೂ ಕರೆ ಮಾಡಿ ತೊಂದ್ರೆ ಕೊಡ್ಬೇಡಿ ಎಂದು ಸಾಹೇಬ್ರು ಹೇಳಿದಾರೆ. ಕಚೇರಿಗೆ ಬಂದಾಗಲೇ ಅವರನ್ನು ಭೇಟಿಯಾಗಬೇಕು..!

ಹೀಗಂತ ಹೇಳಿದ್ದು ಪಟ್ಟಣದ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಚೇರಿ ವ್ಯವಸ್ಥಾಪಕ ಮೆಹಬೂಬ. ಬೇಸಿಗೆ ಆರಂಭ ಹಿನ್ನೆಲೆಯಲ್ಲಿ ಕುಡಿವ ನೀರಿನ ಸ್ಥಿತಿಗತಿ ಕುರಿತಾಗಿ ಮಾಹಿತಿ ಪಡೆಯಲು ಇಲಾಖೆ ಎಇಇ ಸುರೇಶ್‌ಗೆ ವಿಜಯವಾಣಿ ಕರೆ ಮಾಡಿತ್ತು. ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ನಂತರ ಕಚೇರಿಗೆ ತೆರಳಿದ ವೇಳೆ ವ್ಯವಸ್ಥಾಪಕ ಮೆಹಬೂಬ ಮೇಲಿನಂತೆ ಹೇಳಿದ್ದಾರೆ.

ನಿಮ್ಮ ಮೇಲಧಿಕಾರಿ ಕರೆ ಸ್ವೀಕರಿಸುತ್ತಿಲ್ಲ, ನೀವಾದರೂ ಕರೆ ಮಾಡಿ ಎಂದು ಮೆಹಬೂಬ ಅವರನ್ನು ಕೇಳಿದಾಗ ಅವರು ಉಡಾಫೆ ಮಾತುಗಳನ್ನಾಡಿದ್ದಾರೆ. ಕುಡಿವ ನೀರಿನ ಸಮಸ್ಯೆ ಪರಿಹಾರ ಕೊರಿ ಅಧಿಕಾರಿಗಳಿಗೆ ಜನಸಾಮಾನ್ಯರು ಕರೆ ಮಾಡಿ ತಿಳಿಸುವುದು ಸಾಮಾನ್ಯ. ಕಚೇರಿಯಲ್ಲಿದ್ದಾಗಲೇ ಬಂದು ಭೇಟಿ ಮಾಡಬೇಕೆಂದರೆ ಅಧಿಕಾರಿ ಬರುವವರೆಗೆ ಕಚೇರಿಯಲ್ಲಿ ಕಾಯುತ್ತ ಕೂಡಬೇಕೇ ಎಂಬ ಪ್ರಶ್ನೆ ಉದ್ಭವಿಸದೇ ಇರದು.

ನೀರು ಮತ್ತು ನೈರ್ಮಲ್ಯ, ಜಿಪಂ ಉಪ ವಿಭಾಗ, ಲೋಕೋಪಯೋಗಿ ಇಲಾಖೆ ಸೇರಿ ಕಾಮಗಾರಿ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಕಚೇರಿಯಲ್ಲಿ ಇರುವುದೇ ಇಲ್ಲ. ಇತ್ತ ಸಾರ್ವಜನಿಕರ ಕರೆಯನ್ನೂ ಸ್ವೀಕರಿಸುವುದಿಲ್ಲ. ಸಾಹೇಬ್ರು ಸೈಟ್‌ಗೆ ಹೋಗಿದ್ದಾರೆಂದು ಹೇಳುವುದು ಕಚೇರಿಯಲ್ಲಿರುವ ಸಿಬ್ಬಂದಿಗೆ ಕಂಠಪಾಠವಾಗಿದೆ. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ತಾಪಂ ಕೆಡಿಪಿ ಸಭೆಗಳಲ್ಲಿ ಪ್ರತಿ ಬಾರಿ ಚರ್ಚೆಯಾದರೂ ಅಧಿಕಾರಿಗಳು ಅದೇ ವರಸೆ ಮುಂದುವರಿಸಿರುವುದು ತಾಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

ಅಸಹಾಯಕನಾಗಿದ್ದೇನೆ ಎಂದ ಶಾಸಕ: ಅಧಿಕಾರಿಗಳ ಉದಾಸೀನತೆ ಕುರಿತಾಗಿ ವಿಜಯವಾಣಿಯೊಂದಿಗೆ ಪ್ರತಿಕ್ರಿಯಿಸಿದ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆಡಳಿತಾರೂಢ ಸರ್ಕಾರವು ಅಧಿಕಾರಿಗಳನ್ನು ತರುತ್ತದೆ. ಹೀಗಾಗಿ ಯಾವೊಬ್ಬ ಅಧಿಕಾರಿ ನಮ್ಮ ಕೈಗೂ ಸಿಗದಂತಾಗಿದೆ. ಎಲ್ಲವೂ ಅವ್ಯವಸ್ಥೆಯ ಆಗರವಾಗಿದೆ ಎಂದು ಹೇಳಿ ಅಚ್ಚರಿ ಮೂಡಿಸಿದರು.

ಕ್ರಮ ಕೈಗೊಳ್ಳುವುದು ಎಂಎಲ್‌ಎ ಕೆಲಸ: ಡಿಸಿಸಿ ಅಧ್ಯಕ್ಷರೂ ಆದ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅವರನ್ನು ವಿಜಯವಾಣಿ ಸಂಪರ್ಕಿಸಿದಾಗ ಶಾಸಕರ ಮಾತುಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದ ಅವರು, ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸಿದರೆ ಸಭೆಗಳಲ್ಲಿ ತಾಕೀತು ಮಾಡಬೇಕು. ಅಷ್ಟಕ್ಕೂ ತಿದ್ದಿಕೊಳ್ಳದಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದು ಶಾಸಕರಾದವರ ಕೆಲಸ. ಅಂಥ ಅಧಿಕಾರಿ ವಿರುದ್ಧ ಕ್ರಮ ಆಗಬೇಕು ಎಂಬುದು ನನ್ನ ಅಭಿಪ್ರಾಯವೂ ಆಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net