ವಾರ್ಡ್ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಜನರ ಆಕ್ರೋಶ

060223 Kushtagi Budjet Prelimerary meeting
ಕುಷ್ಟಗಿಯ ಪುರಸಭೆಯಲ್ಲಿ ಸೋಮವಾರ ಏರ್ಪಡಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಜಿ.ಕೆ.ಹಿರೇಮಠ ಮಾತನಾಡಿದರು.
Published on

ಕುಷ್ಟಗಿ: ಪುರಸಭೆ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಮಸ್ಯೆಗಳಗೆ ಸ್ಪಂದಿಸುತ್ತಿಲ್ಲ ಎಂದು ವಿವಿಧ ವಾರ್ಡ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಧೂಳಿನಿಂದ ಕೂಡಿದ ರಸ್ತೆಗಳು, ಹೂಳು ತುಂಬಿದ ಚರಂಡಿಗಳು, ಕಸದ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲ. ಪ್ರತಿ ಬಾರಿ ಸಮಸ್ಯೆಗಳು ಪರಿಹಾರ ಮಾಡಲಾಗುವುದೆಂದು ಭರವಸೆ ನೀಡಲಾಗುತ್ತದೆ. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ವಿವಿಧ ವಾರ್ಡ್‌ನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಸಾರ್ವಜನಿಕರ ಸಲಹೆ ಆಧರಿಸಿ ಬಜೆಟ್ ಮಂಡಿಸಲಾಗುವುದು. ನಗರೋತ್ಥಾನ ಯೋಜನೆಯಡಿ ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ವಿವಿಧ ವಾರ್ಡ್‌ಗಳಲ್ಲಿ ಕುಡಿವ ನೀರು, ಬೀದಿದೀಪ, ರಸ್ತೆ, ಚರಂಡಿ ಇನ್ನಿತರ ಅಗತ್ಯ ಕಾಮಗಾರಿ ಕೈಗೊಳ್ಳಲು ಅನುದಾನ ಮೀಸಲಿಡಲಾಗುತ್ತಿದೆ. ಅನುದಾನ ಸದ್ಬಳಕೆಗೆ ಸಾರ್ವಜನಿಕರ ಸಲಹೆ ಅತ್ಯಗತ್ಯ ಎಂದರು.

ಪಟ್ಟಣದ 1-7ನೇ ವಾರ್ಡ್ ವರೆಗೆ ಮಾತ್ರ ದಿನದ 24 ತಾಸು ನೀರು ಪೂರೈಸುವ ಯೋಜನೆಯ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ವಿವಿಧ ವಾರ್ಡ್‌ಗಳಿಗೂ ವಿಸ್ತರಿಸುವಂತೆ ಪುರಸಭೆ ಮಾಜಿ ಸದಸ್ಯ ಚನ್ನಪ್ಪ ನಾಲಗಾರ್ ಒತ್ತಾಯಿಸಿದರು.

ಪಟ್ಟಣದಲ್ಲಿ ಹಾಡಹಗಲೇ ಕಳ್ಳತನವಾಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಯೂ ಸಿಸಿ ಕ್ಯಾಮರಾಗಳಿಲ್ಲ. ವಿವಿಧ ವೃತ್ತ, ವಸತಿ ನಿಲಯ, ಕಾಲೇಜು ಸುತ್ತಮುತ್ತ ಸಿಸಿ ಕ್ಯಾಮರಾ ಅಳವಡಿಸಲು ಹಾಗೂ ರಸ್ತೆ ಬದಿಯಲ್ಲಿ ಗಿಡ ನೆಡಲು ಅನುದಾನ ಮೀಸಲಿಡುವಂತೆ ಹಿರಿಯ ಸಾಹಿತಿ ತಾಜುದ್ದೀನ್ ದಳಪತಿ ಸಲಹೆ ನೀಡಿದರು.

ಪಟ್ಟಣದಲ್ಲಿ ಸಾರ್ವಜನಿಕ ಮೂತ್ರಗೃಹಗಳಿಲ್ಲ. ಗ್ರಾಮೀಣ ಪ್ರದೇಶ ಜನರು ಸಮಸ್ಯೆ ಎದುರಿಸುವಂತಾಗಿದ್ದು, ಕೂಡಲೇ ಕ್ರಮಕೈಗೊಳ್ಳಲು ಮಂಜುನಾಥ ಕಟ್ಟಿಮನಿ ಆಗ್ರಹಿಸಿದರು. ಉಪಾಧ್ಯಕ್ಷೆ ಹನುಮವ್ವ ಕೋರಿ, ಸದಸ್ಯರಾದ ಕಲ್ಲೇಶ ತಾಳದ್, ಮೈನುದ್ದೀನ್ ಮುಲ್ಲಾ, ಜೆ.ಜಿ.ಆಚಾರ್, ಅಂಬಣ್ಣ ಭಜಂತ್ರಿ, ಬಸವರಾಜ ಬುಡಕುಂಟಿ, ವಿಜಯಲಕ್ಷ್ಮೀ ಕಟ್ಟಿಮನಿ, ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ್ ಇದ್ದರು.

ದಾಖಲೆ ನಿರ್ವಹಣೆ ಇಲ್ಲ: ಕರಪಾವತಿಗೆ ಸಂಬಂಧಿಸಿದಂತೆ ದಾಖಲೆ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಜನರು ಎರೆಡು ಬಾರಿ ಪಾವತಿಸುವಂತಾಗುತ್ತಿದೆ. ಆಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆಯೂ ದಾಖಲೆ ನಿರ್ವಹಿಸುತ್ತಿಲ್ಲ. ಸಂಬಂಧಿಸಿದ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ ನಂತರವೂ ಪುರಸಭೆ ದಾಖಲೆಗಳಲ್ಲಿ ಮೂಲ ಮಾಲಿಕರೇ ಹೆಸರೇ ಇರುತ್ತದೆ. ಅಧಿಕಾರಿಗಳು ಮಾಡುವ ತಪ್ಪಿಗೆ ಹತ್ತಾರು ಬಾರಿ ಕಚೇರಿಗೆ ಅಲೆಯಬೇಕಿದೆ ಎಂದು ಹಿರಿಯ ನಾಗರಿಕ ಶೇಖರಯ್ಯ ಸರಗಣಾಚಾರಿ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ನಿರ್ಲಕ್ಷೃಕ್ಕೆ ಬೇಸರ: ವಿವಿಧ ವಾರ್ಡ್‌ಗಳ ಬಹುತೇಕರು 30-40 ವರ್ಷಗಳಿಂದ ತೆರಿಗೆ ಪಾವತಿಸಿಲ್ಲ. ವಾರ್ಷಿಕ 1.5 ಕೋಟಿ ರೂ. ಟ್ಯಾಕ್ಸ್ ಸಂಗ್ರಹವಾಗಬೇಕು. ಈಗ 20-30ಲಕ್ಷ ರೂ.ಮಾತ್ರ ಜಮಾ ಆಗುತ್ತದೆ. ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳುವ ಸಂಬಂಧ ಜಾಗೃತಿ ಮೂಡಿಸಲಾಗಿದೆ. ಆದರೂ ಜನರು ನಿರ್ಮಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಸುಮಾರು 500 ಶೌಚಗೃಹ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. 10 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂದು ಅಧ್ಯಕ್ಷ ಜಿ.ಕೆ.ಹಿರೇಮಠ ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net