ಕುಷ್ಟಗಿಯಲ್ಲಿ ಸಂಚಾರಕ್ಕೆ ಸಂಚಕಾರ - ರಸ್ತೆಯ ಗುಂಡಿಯಲ್ಲಿ ಮಳೆ ನೀರು ಸಂಗ್ರಹ

kst-1
ಕುಷ್ಟಗಿಯ ಗಜೇಂದ್ರಗಡ ರಸ್ತೆಯಿಂದ ವಜ್ರಬಂಡಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ದುಸ್ಥಿತಿ.
Published on

ಕುಷ್ಟಗಿ: ಪಟ್ಟಣದ ಗಜೇಂದ್ರಗಡ ಮುಖ್ಯ ರಸ್ತೆಯಿಂದ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲೀಗ ಮಳೆ ನೀರು ಸಂಗ್ರಹಗೊಂಡು ಜನ, ವಾಹನ ಸಂಚಾರ ದುಸ್ತರವಾಗಿದೆ.

ಪಟ್ಟಣದ ಗಜೇಂದ್ರಗಡ ಮುಖ್ಯ ರಸ್ತೆಯಿಂದ ವಜ್ರಬಂಡಿವರೆಗಿನ ಈ ರಸ್ತೆ 10 ಕಿಮೀ. ಉದ್ದವಿದೆ. ರಸ್ತೆ ಸುಧಾರಣೆ ಕಾಮಗಾರಿ ಕೈಗೊಳ್ಳಬೇಕಿರುವ ಲೋಕೋಪಯೋಗಿ ಇಲಾಖೆಯು ದುರಸ್ತಿ ಕಾರ್ಯವನ್ನೂ ಕೈಗೊಳ್ಳದಿರುವುದು ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

ರಸ್ತೆಯ ಐದು ಕಿ.ಮೀ. ವರೆಗೆ ಅಕ್ಕ-ಪಕ್ಕದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಮದಲಗಟ್ಟಿ, ಶಾಖಾಪುರ ಇನ್ನಿತರ ಗ್ರಾಮಗಳ ರೈತರ ಕೃಷಿ ಜಮೀನುಗಳು, ಅರಣ್ಯ ಕೃಷಿ ಆಧಾರಿತ ತೋಟಗಳಿವೆ.

ಈ ಎಲ್ಲ ರೈತರು ತಮ್ಮ ಜಮೀನುಗಳಿಗೆ ತೆರಳಲು ಇದೇ ರಸ್ತೆ ಅವಲಂಬಿಸಿದ್ದಾರೆ. ಇದೇ ರಸ್ತೆಗೆ ಹೊಂದಿಕೊಂಡು ಅಮರನಾಥೇಶ್ವರ ದೇವಸ್ಥಾನವಿದ್ದು, ನಿತ್ಯ ರಸ್ತೆಯಲ್ಲಿ ಓಡಾಡುವ ರೈತರು ಹಾಗೂ ದೇವಸ್ಥಾನಕ್ಕೆ ತೆರಳುವ ಭಕ್ತರು ಇಲಾಖೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

=====

ಇದೇ ರೋಡ್‌ನಲ್ಲಿ ಬಂದಿದ್ದ ಡಿಸಿ

ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರ ಅರಣ್ಯ ಕೃಷಿ ವೀಕ್ಷಣೆಗೆ ಗುರುವಾರ ಆಗಮಿಸಿದ್ದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಇದೇ ರಸ್ತೆಯಲ್ಲಿ ಬಂದು ಹೋಗಿದ್ದಾರೆ. ಅವರು ಬಂದ ಹಿಂದಿನ ರಾತ್ರಿ ಸುರಿದ ಮಳೆಗೆ ರಸ್ತೆಯ ಗುಂಡಿಗಳು ಭರ್ತಿಯಾಗಿದ್ದವು. ಅಧಿಕಾರ ವಹಿಸಿಕೊಂಡಾಗಿನಿಂದ ಜಿಲ್ಲೆಯ ವಿವಿಧೆಡೆ ಭೇಟಿ ನೀಡುತ್ತ ಸಾರ್ವಜನಿಕರ ಗಮನ ಸೆಳೆಯುತ್ತಿರುವ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಸ್ವತಃ ರಸ್ತೆಯ ದುಸ್ಥಿತಿ ಕಂಡಿದ್ದು, ಅಭಿವೃದ್ಧಿ ಭಾಗ್ಯ ಕರುಣಿಸಬೇಕಿದೆ ಎಂಬುದು ಸುತ್ತಲಿನ ರೈತರ ಅಭಿಪ್ರಾಯವಾಗಿದೆ.

=====

ಪಟ್ಟಣದ ಗಜೇಂದ್ರಗಡ ಮುಖ್ಯ ರಸ್ತೆಯಿಂದ ವಜ್ರಬಂಡಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ಐದಾರು ವರ್ಷಗಳಿಂದ ಯಾವುದೇ ದುರಸ್ತಿ ಕಾಮಗಾರಿಯೂ ನಡೆದಿಲ್ಲ. ರಸ್ತೆಯ ಸುಮಾರು ಐದು ಕಿ.ಮೀ. ವರೆಗೆ ಅಕ್ಕ-ಪಕ್ಕದಲ್ಲಿ ಕುಷ್ಟಗಿ ಸೀಮೆಯ ಕೃಷಿ ಜಮೀನುಗಳಿವೆ. ರಸ್ತೆ ಹದಗೆಟ್ಟಿರುವುದರಿಂದ ಓಡಾಡುವುದು ಕಷ್ಟ ಸಾಧ್ಯವಾಗಿದೆ.

> ದೇವೇಂದ್ರಪ್ಪ ಬಳೂಟಗಿ, ಪ್ರಗತಿಪರ ರೈತ, ಕುಷ್ಟಗಿ

=====

ವಜ್ರಬಂಡಿಗೆ ಸಂಪರ್ಕಿಸುವ ರಸ್ತೆ ಹಾಳಾಗಿದೆ. ರಸ್ತೆ ಸುಧಾರಣೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಿಂದ ಅನುದಾನ ನೀಡಿ ಕಾಮಗಾರಿಗೆ ಅನುಮೋದನೆ ನೀಡುವಂತೆ ಈಗಾಗಲೇ ಎರಡು ಬಾರಿ ಶಾಸಕರಿಗೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಅನುದಾನ ಲಭ್ಯವಾದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು.

> ಭೀಮಸೇನರಾವ್ ವಜ್ರಬಂಡಿ, ಜೆಇ, ಲೋಕೋಪಯೋಗಿ ಇಲಾಖೆ ಉಪ ವಿಭಾಗ, ಕುಷ್ಟಗಿ

=====

ವಜ್ರಬಂಡಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಈ ವರ್ಷ ಕೈಗೆತ್ತಿಕೊಳ್ಳಲಾಗುವುದು. ಕೆಕೆಆರ್‌ಡಿಬಿ ಅಥವಾ ಬೇರಾವುದೇ ಅನುದಾನ ಬಳಸಿಕೊಂಡಾದರೂ ಕಾಮಗಾರಿ ಕೈಗೊಳ್ಳಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ.ರೂ. ಅನುದಾನ ನೀಡುವುದಾಗಿ ಸಿಎಂ ಹೇಳಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ನಿರೀಕ್ಷೆ ಇದೆ.

> ದೊಡ್ಡನಗೌಡ ಪಾಟೀಲ್, ಕುಷ್ಟಗಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net