

ಕುಷ್ಟಗಿ: ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಶುಕ್ರವಾರ ಪಟ್ಟಣಕ್ಕೆ ಭೇಟಿ ನೀಡಿ ಜೆಸ್ಕಾಂ ಉಪವಿಭಾಗ ಕಚೇರಿಗೆ ಹೊಂದಿಕೊಂಡಿರುವ ಪುರಸಭೆಯ ವಾಣಿಜ್ಯ ಮಳಿಗೆಗಳ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಥಳ ಹಾಗೂ ದಾಖಲೆ ಪರಿಶೀಲಿಸಿದರು.
ಮಳಿಗೆಗಳಿಗೆ ಸೆ.5ರಂದು ಟೆಂಡರ್ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಭಾಗವಹಿಸಿದ್ದ ಕೆಲವರು ಇತರರಿಗೆ ಹಣ ನೀಡಿ ಸ್ಪರ್ಧೆ ಏರ್ಪಡದಂತೆ ನೋಡಿಕೊಂಡಿದ್ದರು. ಹೀಗಾಗಿ ಟೆಂಡರ್ ರದ್ದುಗೊಳಿಸಿ, ತನಿಖೆ ಕೈಗೊಳ್ಳುವಂತೆ ಪಟ್ಟಣದ ಸಾಮಾಜಿಕ ಕಾರ್ಯಕರ್ತ ವಜೀರ ಅಲಿ ಗೋನಾಳ ಎನ್ನುವವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಪರಿಶೀಲನೆ ಕೈಗೊಳ್ಳುವಂತೆ ಡಿಸಿ ಸುಂದರೇಶ ಬಾಬು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೆ.7ರಂದು ಪತ್ರ ಬರೆದು ಸೂಚಿಸಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಯೋಜನಾ ನಿರ್ದೇಶಕಿ ಕಾವ್ಯಾರಾಣಿ ತಿಳಿಸಿದರು.
ಸ್ಥಳದಲ್ಲಿದ್ದ ಪುರಸಭೆ ಸದಸ್ಯ ನಾಗರಾಜ ಹಿರೇಮಠ, ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ದೂರಿದರು. ತಹಸೀಲ್ದಾರ್ ಗುರುರಾಜ ಛಲವಾದಿ, ಪುರಸಭೆ ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ್, ಸದಸ್ಯ ರಾಮಣ್ಣ ಬಿನ್ನಾಳ, ಕಂದಾಯ ನಿರೀಕ್ಷಕ ಖಾಜಾಹುಸೇನ್, ವ್ಯವಸ್ಥಾಪಕ ಷಣ್ಮುಖ ಇದ್ದರು.