

ಕುಷ್ಟಗಿ: ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ಗ್ರಾನೈಟ್ ತ್ಯಾಜ್ಯ ಸಂಗ್ರಹಿಸುತ್ತಿರುವ ಜಮೀನು ಮಾಲೀಕನ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿ ನಾಲ್ಕೂವರೆ ತಿಂಗಳಾದರೂ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಅಚ್ಚರಿ ಮೂಡಿಸಿದೆ.
ಪಟ್ಟಣ ಹೊರಲವಲಯದ ದೋಟಿಹಾಳ ರಸ್ತೆ ಪಕ್ಕದ ಜಮೀನಿ(ಸ.ನಂ.258/*/4)ನ ಸುಮಾರು 4ಎಕರೆ ಪ್ರದೇಶದಲ್ಲಿ ಗುಂಡಿ ನಿರ್ಮಿಸಿ ವಿವಿಧ ಗ್ರಾನೈಟ್ ಫ್ಯಾಕ್ಟರಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಜಮೀನಿನ ಸುತ್ತಲೂ ಯಾವುದೇ ತಂತಿ ಬೇಲಿ ಇನ್ನಿತರ ಸುರಕ್ಷಾ ಕ್ರಮ ಕೈಗೊಳ್ಳದಿರುವುದು ಜನ ಜಾನುವಾರುಗಳ ಓಡಾಟಕ್ಕೆ ಕಂಟಕವಾಗಿ ಪರಿಣಮಿಸಿದೆ.
ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಗ್ರಾನೈಟ್ ತ್ಯಾಜ್ಯದ ಜತೆ ಮಳೆ ನೀರು ಸೇರಿದ್ದರಿಂದ ಕುರಿಗಳು ಸಿಲುಕಿಕೊಂಡು ಹೊರಬರಲು ಪರದಾಡಿದ್ದವು. ಆ ಪೈಕಿ ಕುರಿಯೊಂದು ಹೊರಬರದೆ ಸತ್ತಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ವಿಷಾದ ವ್ಯಕ್ತಪಡಿಸಿ ಸಂಬಂಧಿಸಿದ ಜಮೀನು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರರಿಗೆ 2024ರ ಆ.26ರಂದು ಪತ್ರ ಬರೆದಿದ್ದರು. ಅದರಂತೆ ಜಮೀನು ಮಾಲಿಕ ರಾಮಾವತಾರ್ ಬಿನ್ ಚಂಪಾಲಾಲ್ ಡಾಲಿಯಾ ಎಂಬುವವರಿಗೆ ನೋಟಿಸ್ ಜಾರಿ ಮಾಡಿದ್ದ ತಹಸೀಲ್ದಾರರು, ಭೂ ಪರಿವರ್ತನೆಯಾಗದೆ ಅಕ್ರಮವಾಗಿ ಅಪಾರ ಪ್ರಮಾಣದ ಗ್ರಾನೈಟ್ ತ್ಯಾಜ್ಯ ಸಂಗ್ರಹಿಸಿರುವುದು ಕಾನೂನು ಬಾಹಿರವಾಗಿದೆ.
ಸದರಿ ಪ್ರದೇಶವು ಗುಂಡಿಯಾಗಿರುವುದರಿಂದ ಗುಂಡಿಯಲ್ಲಿ ನೀರು ಸಂಗ್ರಹಗೊಂಡು ಜನ-ಜಾನುವಾರುಗಳಿಗೆ ಅಪಾಯವಾಗುವ ಸಂಭವಗಳಿರುವಂತೆ ಕುರಿಯೊಂದು ಸತ್ತಿದೆ. ತ್ಯಾಜ್ಯ ಸಂಗ್ರಹಿಸುತ್ತಿರುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಿ ಮಾಹಿತಿ ನೀಡುವಂತೆ ತಿಳಿಸಿ ತಪ್ಪಿದ್ದಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಅದಾಗಿ ನಾಲ್ಕೂವರೆ ತಿಂಗಳು ಗತಿಸಿದರೂ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ಗ್ರಾನೈಟ್ ತ್ಯಾಜ್ಯ ಸಂಗ್ರಹಿಸುತ್ತಿರುವ ಬಗ್ಗೆ ಜಮೀನು ಮಾಲೀಕ ರಾಮಾವತಾರ್ ಡಾಲಿಯಾಗೆ 2024ರ ಆ.26ರಂದು ನೋಟಿಸ್ ನೀಡಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಿ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಸದ್ಯ ಎರಡನೇ ನೋಟಿಸ್ ನೀಡುವವರಿದ್ದೇವೆ. | ಅಶೋಕ ಶಿಗ್ಗಾವಿ ತಹಸೀಲ್ದಾರ್, ಕುಷ್ಟಗಿ