

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೆಲವೆಡೆ ಮನೆಗಳಿಗೆ ನೀರು ನುಗ್ಗಿದರೆ, ಜಮೀನುಗಳು ಜಲಾವೃತಗೊಂಡು ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆ ಹಾನಿಯಾಗಿದೆ. ಮಣ್ಣಿನ ಮಾಳಿಗೆಯ ಮನೆಗಳು ಬೀಳುವ ಆತಂಕ ಎದುರಾಗಿದ್ದು, ಪಟ್ಟಣದ ಸಂಗಮೇಶ ಮುಶಿಗೇರಿ ಎನ್ನುವವರ ಮನೆಯ ಗೋಡೆ ಕುಸಿದಿದೆ. ಇಡೀ ರಾತ್ರಿ ಸುರಿದ ಮಳೆಗೆ ಹಳ್ಳಗಳು ತುಂಬಿ ಹರಿದರೆ ಕೆರೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಹಿಂಗಾರು ಹಂಗಾಮಿಗೆ ಕಡಲೆ ಹಾಗೂ ಜೋಳ ಬಿತ್ತನೆಗೆ ಜಮೀನು ಹದಗೊಳಿಸಿರುವ ರೈತರು ಮಳೆ ನಿಲ್ಲುವವರೆಗೆ ಕಾಯುವಂತಾಗಿದೆ. ಕಳೆದ ತಿಂಗಳು ಸುರಿದ ಮಳೆಗೆ ಮೆಕ್ಕೆಜೋಳ, ಸಜ್ಜೆ ಹಾಗೂ ಈರುಳ್ಳಿ ಬೆಳೆ ಹಾನಿಗೀಡಾಗಿದ್ದು, ಯಾವುದೇ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿಲ್ಲ ಎಂದು ರೈತರು ದೂರುತ್ತಿದ್ದಾರೆ.
ರಾತ್ರಿ ಸುರಿದ ಮಳೆಗೆ ಜಮೀನು ಜಲಾವೃತಗೊಂಡಿದೆ. ಮೆಕ್ಕೆಜೋಳ ಬೆಳೆ ಕೈಗೆ ಬಂದಿದ್ದು, ರಾಶಿ ಮಾಡಲು ಕಷ್ಟವಾಗುತ್ತಿದೆ. ಕಳೆದ ತಿಂಗಳು ಸುರಿದ ಮಳೆಗೂ ಇದೇ ರೀತಿ ಜಲಾವೃತಗೊಂಡಿತ್ತು. ಅಧಿಕಾರಿಗಳ ಗಮನಕ್ಕೆ ತಂದರೂ ಭೇಟಿ ನೀಡಿಲ್ಲ| ಪವಾಡೆಪ್ಪ ಚೌಡ್ಕಿ ಕುಷ್ಟಗಿ ರೈತ