ಸ್ಪಷ್ಟ ಭಾಷಾ ಕಲಿಕೆ ಇಂದಿನ ಅಗತ್ಯ, ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಹೇಳಿಕೆ

EXM MEETING
ಅರವಿಂದ ಚೊಕ್ಕಾಡಿ
Published on

ಕುಷ್ಟಗಿ: ಭಾಷೆಯ ಸ್ಪಷ್ಟ ಕಲಿಕೆ ಪ್ರಾಥಮಿಕ ಹಂತದಲ್ಲೇ ನಡೆಯಬೇಕಿರುವುದು ಇಂದಿನ ತುರ್ತು ಅಗತ್ಯ ಎಂದು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಹೇಳಿದರು.

ಪಟ್ಟಣದ ಎಸ್‌ವಿಸಿ ಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪರೀಕ್ಷಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಷೆಯನ್ನು ಸರಿಯಾಗಿ ಕಲಿಸುವುದು ಓದುವಿಕೆಯನ್ನು ಉತ್ತೇಜಿಸುತ್ತದೆ. ಓದು ಮನೋವಿಕಾಸಕ್ಕೆ ದಾರಿ ಮಾಡಿಕೊಡುತ್ತದೆ. ಇಂದು ಪ್ರಾಥಮಿಕ ಹಂತದಲ್ಲಿ ಭಾಷೆಯನ್ನು ಸರಿಯಾಗಿ ಕಲಿಸುತ್ತಿಲ್ಲ. ಹೀಗಾಗಿ ಸ್ನಾತಕೋತ್ತರ ಪದವಿ ಪಡೆದವರೂ ಸ್ಪಷ್ಟವಾಗಿ ಬರೆಯಲು ಸಾಧ್ಯವಾಗುತ್ತಿಲ್ಲ ಹಾಗೂ ಅವರಿಗೆ ಓದಿನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರಾದವರಿಗೂ ವ್ಯಾಕರಣಬದ್ಧವಾಗಿ ಬರೆಯಲು ಆಗುತ್ತಿಲ್ಲ. ಕಾರಣ ಅವರು ಭಾಷೆಯನ್ನು ಸರಿಯಾಗಿ ಕಲಿತಿಲ್ಲ. ಇಂಥ ಶಿಕ್ಷಕರಿಂದ ಮಕ್ಕಳ ಮನೋವಿಕಾಸ ಕುಂಠಿತಗೊಂಡಿದೆ ಎಂದರು.

ಪಾಲಕರೇ ಮೊಬೈಲ್ ಬಳಕೆ ಕಡಿಮೆ ಮಾಡುವುದೇ ಮಕ್ಕಳನ್ನು ಫೋನ್ ಗೀಳಿನಿಂದ ತಪ್ಪಿಸಲು ಇರುವ ಏಕೈಕ ಮಾರ್ಗ. ಮನೆಯಲ್ಲಿ ಪುಸ್ತಕಗಳು ಹಾಗೂ ದಿನಪತ್ರಿಕೆಗಳು ಇರುವಂತೆ ನೋಡಿಕೊಳ್ಳಬೇಕು. ಟ್ಯೂಷನ್ ಬದಲಾಗಿ ಮಕ್ಕಳನ್ನು ಆಟಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮೊಬೈಲ್ ಮೇಲಿನ ವ್ಯಾಮೋಹ ಕಡಿಮೆ ಮಾಡಬಹುದು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮೇಲೆ ಶಿಕ್ಷಕರು ಹೆಚ್ಚು ಗಮನಹರಿಸುವುದರಿಂದ ಫಲಿತಾಂಶದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದರು.

ಪರೀಕ್ಷಾ ಕೌಶಲಗಳು, ನೆನಪಿಡುವ ತಂತ್ರಗಳು ಹಾಗೂ ಉತ್ತರ ಬರೆಯುವ ಮಾದರಿಗಳ ಕುರಿತು ವಿವರಿಸಿದರು. ವಿವಿಧ ಶಾಲೆಗಳ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಮ್ಮಟದಲ್ಲಿ ಪಾಲ್ಗೊಂಡಿದ್ದರು. ಎಸ್‌ವಿಸಿ ಶಾಲೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net