

ಕುಷ್ಟಗಿ: ಪಟ್ಟಣದ ತಾಲೂಕು ಪಂಚಾಯಿತಿಗೆ ಸೇರಿದ 9 ವಾಣಿಜ್ಯ ಮಳಿಗೆಗಳಿಗೆ ತಾಪಂ ಸಿಬ್ಬಂದಿ ಶುಕ್ರವಾರ ಬೀಗ ಜಡಿದರು. ಲಕ್ಷಾಂತರ ರೂ. ಬಾಡಿಗೆ ಬಾಕಿ ಇರಿಸಿಕೊಂಡಿದ್ದ ವ್ಯಾಪಾರಿಗಳಿಗೆ ಹಲವು ಬಾರಿ ನೋಟಿಸ್ ನೀಡಿ ಎಚ್ಚರಿಕೆ ನೀಡಿದಾಗ್ಯೂ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ತಾಪಂ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡರು.
ತಾಪಂ ಕಚೇರಿಗೆ ಹೊಂದಿಕೊಂಡು ಒಟ್ಟು 54 ಮಳಿಗೆಗಳಿದ್ದು, ಆ ಪೈಕಿ ಮಲ್ಲಿಕಾರ್ಜುನ ಗುಗ್ಗರಿ ಹಾಗೂ ಮಾರುತಿ ಹಲಗಿ ಎನ್ನುವವರು 66 ತಿಂಗಳಿನ ತಲಾ 4.62ಲಕ್ಷ ರೂ., ಲಕ್ಷ್ಮೀಬಾಯಿ ಗೋಂಧಳೆ ಎನ್ನುವವರು 44ತಿಂಗಳಿನ 3.8 ಲಕ್ಷ ರೂ., ಎಂ.ಡಿ.ಜವೇದ್ ಎನ್ನುವವರು 111 ತಿಂಗಳಿನ 1.66 ಲಕ್ಷ ರೂ., ಗೋಪಾಲಶೆಟ್ಟಿ ಎನ್ನುವವರು 45 ತಿಂಗಳಿನ 90 ಸಾವಿರ ರೂ., ಸಂಗಮೇಶ ಹಡಪದ್ ಎನ್ನುವವರು 55ತಿಂಗಳಿನ 27500ರೂ., ಲತಾ ಹೊರಪ್ಯಾಟಿ ಎನ್ನುವವರು 40ತಿಂಗಳಿನ 80ಸಾವಿರ ರೂ., ಅಂಬಾದೇವಿ ಫೈನಾನ್ಸ್‌ನವರು 28ತಿಂಗಳಿನ 56ಸಾವಿರ ರೂ. ಹಾಗೂ ರಮೇಶ ನೀಲಿ ಎನ್ನುವವರು 10ತಿಂಗಳಿನ 20ಸಾವಿರ ರೂ. ಬಾಕಿ ಇರಿಸಿಕೊಂಡಿದ್ದರು. ಇವರಿಗೆಲ್ಲ ಬಾಕಿ ಪಾವತಿಸಲು ಅ.5ರ ಅಂತಿಮ ಗಡುವು ನೀಡಲಾಗಿತ್ತು. ನಂತರದಲ್ಲಿಯೂ ನಿರ್ಲಕ್ಷ್ಯ ವಹಿಸಿದ್ದಕ್ಕೆ ಮಳಿಗೆಗಳಿಗೆ ಬೀಗ ಜಡಿದು ಸೀಜ್ ಮಾಡಲಾಯಿತೆಂದು ತಾಪಂ ಇಒ ಪಂಪಾಪತಿ ಹಿರೇಮಠ ತಿಳಿಸಿದರು.
ಬಾಡಿಗೆ ಪರಿಷ್ಕರಣೆಯೂ ಇಲ್ಲ!: ಮಳಿಗೆಗಳಿಗೆ 2010-11ನೇ ಸಾಲಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಅಂದು ಬಾಡಿಗೆ ಪಡೆದವರೇ ಈಗಲೂ ಮುಂದುವರಿದಿದ್ದಾರೆ. ಮಳಿಗೆಗಳ ಗಾತ್ರ ಆಧರಿಸಿ 500ರೂ.ಗಳಿಂದ ಗರಿಷ್ಠ 7ಸಾವಿರ ರೂ. ವರೆಗೆ ಬಾಡಿಗೆ ನಿಗದಿ ಮಾಡಲಾಗಿದೆ. ಈ ವರೆಗೆ ಒಮ್ಮೆಯೂ ಬಾಡಿಗೆ ಪರಿಷ್ಕರಣೆ ಆಗಿಲ್ಲ. ಪಟ್ಟಣ ಹೃದಯ ಭಾಗದಲ್ಲಿರುವ ಮಳಿಗೆಗಳಿಗೆ ಭಾರಿ ಬೇಡಿಕೆ ಇದ್ದರೂ ಮರು ಟೆಂಡರ್ ನಡೆಸದೆ, ಬಾಡಿಗೆ ಪರಿಷ್ಕರಣೆಯನ್ನೂ ಮಾಡದೆ ತಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬಾಕಿ ಪಾವತಿಯೂ ವಿಳಂಬವಾಗಿ ಸಾರ್ವಜನಿಕರಿಂದ ಒತ್ತಡ ಬಂದಾಗ ಮಾತ್ರ ವಸೂಲಿ ಕಾರ್ಯ ನಡೆಸಿ ತಾಕೀತು ಮಾಡಲಾಗುತ್ತಿದೆ ಎಂದು ಪಟ್ಟಣ ವಾಸಿಗಳು ದೂರಿದ್ದಾರೆ.