ಸಮಾಜ ಸುಧಾರಕರಂತೆ ಕಾರ್ಯ ನಿರ್ವಹಿಸಿ

Teachers' Day Celebration
ಕುಷ್ಟಗಿಯಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಪ್ರಭಾರ ಬಿಇಒ ಎಂ.ಜಗದೀಶಪ್ಪ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಗುನ್ನಾಳ ಇತರರು ಇದ್ದರು.
Published on

ಕುಷ್ಟಗಿ: ಶಿಕ್ಷಕರು ಪಠ್ಯ ವಿಷಯಗಳಿಗೆ ಸೀಮಿತರಾಗದೆ ಸಮಾಜ ಸುಧಾಕರಂತೆ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಪಟ್ಟಣದ ಕ್ರೈಸ್ತ್ ದ ಕಿಂಗ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ತರದ್ದಾಗಿದೆ. ಮಕ್ಕಳಲ್ಲಿ ಪಠ್ಯ ವಿಷಯ ಜತೆಗೆ ದೇಶಭಕ್ತಿ, ನಾಡಿನ ಪರಂಪರೆ, ಸಂಸ್ಕೃತಿ ಹಾಗೂ ಮಾನವೀಯ ನೆಲೆಗಳ ಕುರಿತು ತಿಳಿ ಹೇಳಬೇಕಿದೆ. ಆ ಮೂಲಕ ಶಿಕ್ಷಣ ವ್ಯವಸ್ಥೆ ಬಲಪಡಿಸಬೇಕಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ನಡೆದ ದಾರಿಯಲ್ಲಿ ಶಿಕ್ಷಕರು ನಡೆಯಬೇಕಿದೆ. ಬದುಕು ನಿಂತ ನೀರಲ್ಲ. ಪ್ರತಿಯೊಬ್ಬರೂ ಜೀವನ ಪೂರ್ತಿ ಕಲಿಯುತ್ತಲೇ ಇರುತ್ತೇವೆ. ಶಿಕ್ಷರಾದವರೂ ನಿರಂತರ ಅಧ್ಯಯನಶೀಲರಾಗಿರಬೇಕು ಎಂದು ಸಲಹೆ ನೀಡಿದರು.

ತುಂಗಭದ್ರಾ ಯೋಜನೆಯ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ, ಶಾಲಾ ಶಿಕ್ಷಣಕ್ಕೆ ಸರ್ಕಾರ ಹತ್ತು ಹಲವು ಯೋಜನೆ ಜಾರಿ ಮಾಡಿ ವಿವಿಧ ಸೌಲಭ್ಯ ನೀಡುತ್ತಿದೆ. ಅದಾಗ್ಯೂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಕರು ಆಸಕ್ತಿಯಿಂದ ಕಲಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಎಂದರು.

ಮಂಡಿಕೇಶ್ವರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಸವರಾಜ ಅಂಚಲಿ ವಿಶೇಷ ಉಪನ್ಯಾಸ ನೀಡಿದರು. ಪ್ರಭಾರ ಬಿಇಒ ಎಂ.ಜಗದೀಶಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಗುನ್ನಾಳ, ಪುರಸಭೆ ಸದಸ್ಯೆ ಇಮಾಮಬಿ ಕಲಬುರಗಿ, ಕ್ರೈಸ್ತ್ ದ ಕಿಂಗ್ ಶಾಲೆಯ ರೆವರೆಂಡ್ ಫಾದರ್ ಜಾನ್ ಪೀಟರ್, ಪ್ರಮುಖರಾದ ನೀಲನಗೌಡ ಹೊಸಗೌಡ್ರ, ಮಹಾದೇವಪ್ಪ ಗೊಣ್ಣಾಗರ, ಜಗದೀಶ ಸೂಡಿ, ನಾಗಪ್ಪ ಬಿಳಿಯಪ್ಪನವರ್ ಸೇರಿದಂತೆ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಾಗೂ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮಲ್ಲಯ್ಯ ವೃತ್ತದಿಂದ ಕ್ರೈಸ್ತ್ ದ ಕಿಂಗ್ ಶಾಲೆವರೆಗೆ ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರ ಮೆರವಣಿಗೆ ನಡೆಯಿತು.

ವೃತ್ತಿಗೆ ಅಗೌರವ ಸರಿಯಲ್ಲ: ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡುವ ವೇಳೆ ಕೆಲ ಶಿಕ್ಷಕರು ಊಟಕ್ಕೆಂದು ಎದ್ದು ತೆರಳುತ್ತಿದ್ದರು. ಇದನ್ನು ಕಂಡ ಶಾಸಕ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದ ಮಧ್ಯೆ ಎದ್ದು ಹೋಗುವುದನ್ನು ಕಂಡರೆ ನನ್ನ ಮಾತು ಮುಗಿಯುತ್ತಿದ್ದಂತೆ ವೇದಿಕೆಯ ಮೇಲೆ ಸನ್ಮಾನಿತರು ಮಾತ್ರ ಇರುತ್ತಾರೆ. ಊಟ, ನಿದ್ದೆ ಇವೆಲ್ಲವೂ ದೈನಂದಿನ ಪ್ರಕ್ರಿಯೆಗಳು. ಇಂಥ ಸಂದರ್ಭಗಳಲ್ಲಿಯಾದರೂ ಅವುಗಳ ಕಡೆ ಗಮನ ಹರಿಸದೆ ಕಾರ್ಯಕ್ರಮ ಯಶಸ್ವಿಗೊಳಿಸಿ ಮಾದರಿಯಾಗಬೇಕು. ಆ ಮೂಲಕ ನಿಮ್ಮ ವೃತ್ತಿಗೆ ಗೌರವ ತಂದುಕೊಳ್ಳಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net