ಹೂಳೋದಕ್ಕೂ ಜಾಗ ಇಲ್ದಂಗ ಮಾಡಿದ್ರಲ್ಲೋ, ಕುಷ್ಟಗಿ ತಹಸಿಲ್ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ

Nidasheshi Villagers Protest
ಕುಷ್ಟಗಿ ತಾಲೂಕು ನಿಡಶೇಸಿ ಗ್ರಾಮಸ್ಥರು ರುದ್ರಭೂಮಿ ಉಳಿಸಿಕೊಡುವಂತೆ ಒತ್ತಾಯಿಸಿ ತಹಸಿಲ್ ಕಚೇರಿ ಎದುರು ಅಣಕು ಶವ ಪ್ರದರ್ಶಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Published on

ಕುಷ್ಟಗಿ: ರುದ್ರಭೂಮಿ ಉಳಿಸಿಕೊಡುವಂತೆ ಒತ್ತಾಯಿಸಿ ತಾಲೂಕಿನ ನಿಡಶೇಸಿ ಗ್ರಾಮಸ್ಥರು ತಹಸಿಲ್ ಕಚೇರಿ ಎದುರು ಶುಕ್ರವಾರ ಕಲ್ಪಿತ ಶವ ಪ್ರದರ್ಶಿಸಿ ಬಾಯಿ ಬಡಿದುಕೊಂಡು ಪ್ರತಿಭಟನೆ ನಡೆಸಿದರು.

ಗ್ರಾಮದ ರುದ್ರಭೂಮಿಯಿಂದ ಪಾದಯಾತ್ರೆ ಹೊರಟ ಗ್ರಾಮಸ್ಥರು ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗ್ರಾಮದ ವ್ಯಕ್ತಿಯೊಬ್ಬನನ್ನು ಮಲಗಿಸಿ, ನಿನ್ನ ಹೂಳೋದಕ್ಕೂ ತಹಸೀಲ್ದಾರ್ ಜಾಗ ಇಲ್ದಂಗ ಮಾಡಿದ್ರಲ್ಲೋ ಎಂದು ಅತ್ತು ಆಕ್ರೋಶ ವ್ಯಕ್ತಪಡಿಸಿದರು. ರುದ್ರಭೂಮಿ ಉಳಿಸಿಕೊಡುವಂತೆ ಆಗ್ರಹಿಸಿ ತಹಸೀಲ್ದಾರ್ ವಿರುದ್ಧ ಘೋಷಣೆ ಹಾಕಿದರು.

ಪ್ರಮುಖ ರಾಮಣ್ಣ ಬಂಡಿಹಾಳ ಮಾತನಾಡಿ, ಗ್ರಾಮದ ಸರ್ವ ಸಮುದಾಯದವರ ಅಂತ್ಯ ಸಂಸ್ಕಾರ ನಡೆಯುತ್ತಿದ್ದ ರುದ್ರಭೂಮಿ ಜಾಗವನ್ನು ವ್ಯಕ್ತಿಯೊಬ್ಬರು ಖರೀದಿಸಿ ನಿವೇಶನಗಳನ್ನಾಗಿ ಪರಿವರ್ತಿಸಿದ್ದಾರೆ. ಸುಮಾರು 200 ವರ್ಷಗಳಿಂದ ರುದ್ರಭೂಮಿಯಾಗಿದ್ದ ಜಮೀನನ್ನು ನಿವೇಶನಗಳನ್ನಾಗಿ ಪರಿವರ್ತಿಸದಂತೆ ಮನವಿ ಮಾಡಿದರೂ ತಹಸೀಲ್ದಾರ್ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಎನ್‌ಎ ರದ್ದುಗೊಳಿಸಿ ರುದ್ರಭೂಮಿ ಉಳಿಸಿಕೊಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net