

ಕುಷ್ಟಗಿ: ಶ್ರೀಶೈಲ ಭೂಮಂಡಲದ ನಾಭಿ ಕ್ಷೇತ್ರವಾಗಿದೆ. ಕ್ಷೇತ್ರದ ದರ್ಶನದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಗದ್ಗರುಗಳ ದ್ವಾದಶ ಪೀಠಾರೋಹಣ ಮಹೋತ್ಸವ, ಜನ್ಮ ಸುವರ್ಣ ಮಹೋತ್ಸವ ನಿಮಿತ್ತ ಪಟ್ಟಣದ ಮದ್ದಾನೇಶ್ವರ ಮಠದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಭಕ್ತರ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪ್ರಾಚೀನ ಋಷಿಮುನಿಗಳು ಶ್ರೀಶೈಲವನ್ನು ಭೂಮಿಯ ಮಧ್ಯಭಾಗ ಎಂದು ಗುರುತಿಸಿದ್ದಾರೆ. ಧಾರ್ಮಿಕ ವ್ಯವಹಾರಗಳಿಗೆ ಕೇಂದ್ರ ಸ್ಥಾನವೂ ಆಗಿದೆ. ಯುಗಯುಗಗಳಿಂದ ಪುಣ್ಯಪುರುಷರು ಪೂಜೆ ಸಲ್ಲಿಸಿದ ಇತಿಹಾಸ ಶ್ರೀಶೈಲಕ್ಕಿದೆ. ಶ್ರೀರಾಮಚಂದ್ರ ಸೀತೆಯೊಟ್ಟಿಗೆ ಜೋತಿರ್ಲಿಂಗ ದರ್ಶನ ಪಡೆದು ಲಿಂಗ ಸ್ಥಾಪನೆ ಮಾಡಿರುವ ಹಾಗೂ ಪಾಂಡವರೂ ಲಿಂಗ ಸ್ಥಾಪನೆ ಮಾಡಿರುವ ಕುರುಹುಗಳು ಕ್ಷೇತ್ರದಲ್ಲಿವೆ ಎಂದರು.
ಅ.29ರಿಂದ 2023ರ ಜ.15ರ ವರೆಗೆ ವಿವಿಧ ಧಾರ್ಮಿಕ, ಸಾಮಾಜಿಕ ಜಾಗೃತಿ ಹಾಗೂ ಪಾದಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ತನು, ಮನ, ಧನದಿಂದ ಪಾಲ್ಗೊಂಡು ಪುನೀತರಾಗಬೇಕಿದೆ ಎಂದರು.
ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಚಳಗೇರಾದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರುಗಳ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ನಿಮಿತ್ತ ಅ.29ರಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರುದಿಂದ ಶ್ರೀಶೈಲವರೆಗೆ ಜಗದ್ಗುರುಗಳೊಂದಿಗೆ ಅಸಂಖ್ಯಾತ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು. ಮಾರ್ಗಮಧ್ಯೆ ಧರ್ಮಜಾಗೃತಿ, ಲಿಂಗದೀಕ್ಷೆ, ದುಶ್ಚಟಗಳ ಭಿಕ್ಷೆಯಂತಹ ಕಾರ್ಯಕ್ರಮಗಳ ಜತೆಗೆ ರಸ್ತೆ ಉದ್ದಕ್ಕೂ 2.5 ಲಕ್ಷ ಸಸಿ ನೆಡಲಾಗುತ್ತಿದೆ. ಜ.10ರಿಂದ ಅಖಿಲ ಭಾರತ ವೀರಶೈವ ಮಹಾಸಭಾದ ಮಹಾ ಅಧಿವೇಶನ, ರಾಷ್ಟ್ರೀಯ ವೇದಾಂತ ಸಮ್ಮೇಳನ, ವೀರಶೈವಾಗಮ ಸಮಾವೇಶ, ತೆಲಗು, ಕನ್ನಡ, ಮರಾಠಿ ವೀರಶೈವ ಸಾಹಿತ್ಯಗೋಷ್ಠಿ, ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿವೆ. ಭಕ್ತರಿಗೆ ತುಲಾಭಾರ, ಇಷ್ಟಲಿಂಗ ಪೂಜೆ, ದಾಸೋಹ ಸೇವೆಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಸೇವೆ ಸಲ್ಲಿಸಬಹುದು ಎಂದರು.
ನಿಡಶೇಸಿಯ ಚನ್ನಬಸವ ಸ್ವಾಮೀಜಿ, ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಮಾಜಿ ಶಾಸಕ ಕೆ.ಶರಣಪ, ಪ್ರಮುಖರಾದ ಶೇಖರಗೌಡ ಪಾಟೀಲ್, ದೇವೇಂದ್ರಪ್ಪ ಬಳೂಟಗಿ, ಬಸೆಟೆಪ್ಪ ಕುಂಬಳಾವತಿ, ಎಸ್.ಎಚ್.ಹಿರೇಮಠ ಸೇರಿದಂತೆ ನೂರಾರು ಭಕ್ತರಿದ್ದು, ದೇಣಿಗೆ ಸಮರ್ಪಿಸಿದರು.