ಹಿಮಾಲಯ ಪರ್ವತಕ್ಕಿದೆ ಪಾಪ ನಿವಾರಿಸುವ ಶಕ್ತಿ

Raghavendra Week Festival
ಕುಷ್ಟಗಿಯ ಅಡವಿ ಮುಖ್ಯ ಪ್ರಾಣೇಶ ದೇವಸ್ಥಾನಲ್ಲಿ ನಡೆಯುತ್ತಿರುವ ಶ್ರೀ ರಾಘವೇಂದ್ರ ಸಪ್ತಾಹದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರರನ್ನು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹಾಗೂ ಪೇಜಾವರದ ಶ್ರೀ ವಿಶ್ವಪ್ರಸನ್ನ ತೀರ್ಥರು ಶಾಲು ಹೊದಿಸಿ ಆಶೀರ್ವದಿಸಿದರು. ಬ್ತಾಹ್ಮಣ ಸಮುದಾಯದ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ, ದೇವಸ್ಥಾನದ ಪ್ರಧಾನ ಅರ್ಚಕ ಮದ್ವಾಚಾರ ಪೂಜಾರ ಇದ್ದರು.
Published on

ಕುಷ್ಟಗಿ: ಭಾರತದಲ್ಲಿ ದೇವರು ಮಾಡಿದ ಕರುಣೆಯೇ ಹಿಮಾಲಯ ಪರ್ವತವಾಗಿದೆ ಎಂದು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹೇಳಿದರು.

ಪಟ್ಟಣದ ಅಡವಿ ಮುಖ್ಯ ಪ್ರಾಣೇಶ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ರಾಘವೇಂದ್ರ ಸಪ್ತಾಹದ ನಾಲ್ಕನೇ ದಿನವಾದ ಸೋಮವಾರ ಅನುಗ್ರಹ ಸಂದೇಶ ನೀಡಿದರು. ಇದು ಭಾರತದ ಅಖಂಡ ತಡೆಗೋಡೆಯಾಗಿದೆ. ಪರ್ವತಕ್ಕೆ ಅಖಂಡತೆಯ ವಿಭೂತಿ ರೂಪ ಇರುವುದರಿಂದ ಅಲ್ಲಿನ ಮಣ್ಣಿನಲ್ಲಿ ಪಾಪ ನಿವಾರಣೆ ಮಾಡುವ ಶಕ್ತಿ ಇದೆ.

ಮನೆಯ ರಹಸ್ಯ, ಭಿನ್ನಾಭಿಪ್ರಾಯಗಳು ಹೊರ ಹೋಗದಂತೆ ಹಾಗೂ ಹೊರಗಿನ ಕಸ ಹಾಗೂ ವಿಕೃತಿಗಳು ಒಳ ನುಸುಳದಂತೆ ಸಂಸ್ಕೃತಿಯ ರಕ್ಷಣೆ ಮಾಡುವ ಮನೆಯ ಹೊಸ್ತಲಿನಂತೆ ದೇಶಕ್ಕೆ ಹಿಮಾಲಯ ಪರ್ವತವಿದೆ. ಮೂರು ಕಡೆ ಜಲ ಆವರಣ ಒಂದು ಕಡೆ ಪರ್ವತದ ಆವರಣ ಇರುವುದರಿಂದ ದೇಶ ಸುರಕ್ಷಿತವಾಗಿದೆ. ಭಾರತದ ಸೇನೆಯಲ್ಲಿಯೂ ಭಗವಂತನ ವಿಭೂತಿ ರೂಪ ಇದೆ. ಇಲ್ಲದೇ ಹೋದಲ್ಲಿ ಕಾಶ್ಮೀರ ನಮ್ಮ ವಶ ಆಗುತ್ತಿರಲಿಲ್ಲ.

ದೇಶದಲ್ಲಿ ಬಹಳಷ್ಟು ಪ್ರಧಾನ ಮಂತ್ರಿಗಳು ಆಗಿ ಹೋಗಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರಂಥ ಪ್ರಧಾನಿಯನ್ನು ಕಂಡಿರಲಿಲ್ಲ. ದೇಶದ ಸಂಸ್ಕೃತಿಗೋಸ್ಕರ ಜೀವನವನ್ನೇ ಮುಡಿಪಾಗಿಟ್ಟ ಮೋದಿಯವರಲ್ಲಿಯೂ ಭಗವಂತನ ವಿಭೂತಿ ರೂಪ ಇದೆ ಎಂದು ಬಣ್ಣಿಸಿದರು. ತಿನ್ನುವ ಆಹಾರ ಪದಾರ್ಥದ ಒಂದೊಂದು ಅಗಳಿನಲ್ಲಿಯೂ ಭಗವಂತನ ವಿಭೂತಿ ರೂಪ ಇದ್ದು ಅನುಸಂಧಾನ ಮಾಡಿ ಸೇವಿಸಬೇಕು ಎಂದು ಹೇಳಿದರು.

ಪೇಜಾವರದ ವಿಶ್ವಪ್ರಸನ್ನ ತೀರ್ಥರು ಅನುಗ್ರಹ ಸಂದೇಶ ನೀಡಿ, ದೇವರು ನಮ್ಮಿಂದ ಬಯಸುವ ಸ್ವತ್ತು ಪರಿಶುದ್ಧ ಮನಸ್ಸು ಆಗಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಅಪಾರ. ಅವರು ಲೋಕದ ಭಗವತ್ ಭಕ್ತರ ಸಂಕಷ್ಟ ದೂರ ಮಾಡುತ್ತಾರೆ. ಪೂರ್ವಾಶ್ರಮದಲ್ಲಿ ವಾರದಲ್ಲಿ ಎರಡು ಮೂರು ದಿನ ಉಪವಾಸ ಇರುತ್ತಿದ್ದ ಸ್ವಾಮಿಗಳು ಬಯಸಿದವರಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ ಎಂದರು.

ಬ್ರಾಹ್ಮಣ ಸಮುದಾಯದ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ, ದೇವಸ್ಥಾನದ ಪ್ರಧಾನ ಅರ್ಚಕ ಮದ್ವಾಚಾರ ಪೂಜಾರ ಇದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಉಭಯ ಶ್ರೀಗಳ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net