

ಕುಷ್ಟಗಿ: ಶಿರಗುಂಪಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಸಮರ್ಪಕ ಅನುಷ್ಠಾನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಗ್ರಾಮಸ್ಥರು ಕರವೇ ನೇತೃತ್ವದಲ್ಲಿ ಗ್ರಾಪಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಜೆಜೆಎಂ ಕಾಮಗಾರಿಗೆ ಅಳವಡಿಸಿದ್ದ ಪೈಪ್‌ಲೈನ್ ಕಿತ್ತು ಹೋಗಿದೆ. ಅಲಲ್ಲಿ ಪೈಪ್‌ಗಳು ಒಡೆದುಹೋಗಿವೆ. ಬಹುತೇಕ ಮನೆಗಳಿಗೆ ಈವರೆಗೆಯಾದರೂ ನಳ ಸಂಪರ್ಕ ಕಲ್ಪಿಸಿಲ್ಲ. ಪೈಪ್‌ಲೈನ್‌ಗಾಗಿ ಸಿಸಿ ರಸ್ತೆಗಳನ್ನು ಅಗೆದು ಕೈಬಿಡಲಾಗಿದೆ. ಎಲ್ಲವನ್ನೂ ಸರಿಪಡಿಸಿ ಯೋಜನೆ ಅನುಷ್ಠಾನಗೊಳಿಸಬೇಕು. ಸಾರ್ವಜನಿಕ ಮಹಿಳಾ ಶೌಚಗೃಹದ ಸರ್ಕಾರಿ ಜಾಗವನ್ನು ಕೆಲವರು ಒತ್ತುವರಿ ಮಾಡಲು ಮುಂದಾಗಿದ್ದಾರೆ. ಜಾಗವನ್ನು ಗ್ರಾಪಂ ಅಧೀನಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಗ್ರಾಮಕ್ಕೆ ಹೊಂದಿಕೊಂಡಿರುವ ರುದ್ರಭೂಮಿ ಜಾಗಕ್ಕೆ ಹದ್ದುಬಸ್ತು ಗುರುತಿಸಿ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಬೇಕು. ಗ್ರಾಮದ ದೋಟಿಹಾಳ ರಸ್ತೆಯ ಜನತಾ ಕಾಲನಿಯಲ್ಲಿ ಚರಂಡಿ ಸ್ವಚ್ಛತೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ಗ್ರಾಪಂ ನಿರ್ಲಕ್ಷ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.