

ಕುಷ್ಟಗಿ: ಮಹಿಳೆಯರಿಗೆ ಭದ್ರತೆ ನೀಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಪಟ್ಟಣದ ಜೆಎಂಎಫ್‌ಸಿ ಕೋರ್ಟ್‌ನ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್.ಪೂಜೇರಿ ಹೇಳಿದರು.
ತಾಲೂಕಿನ ತಳುವಗೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸಹಿಸಿಕೊಳ್ಳುವ ಗುಣವನ್ನು ಆಕೆಯ ದೌರ್ಬಲ್ಯ ಎಂದು ತಿಳಿಯಬಾರದು. ಮಹಿಳೆಯರು ಕಾನೂನಿನ ಅರಿವು ಹೊಂದಿ ತೊಂದರೆ ಎದುರಾದಾಗ ಕಾನೂನಿನ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ್ ಮಾತನಾಡಿ, ಜನಸಾಮಾನ್ಯರು ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಬೇಕು ಎನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಸದುಪಯೋಗ ಪಡೆಯಬೇಕಿದೆ ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕ ಎಲ್.ರಾಯನಗೌಡ, ಬಿಆರ್‌ಪಿ ಲೋಕೇಶ ಗೋಟೂರು, ವಕೀಲರ ಸಂಘದ ಪದಾಧಿಕಾರಿ ಮೈನುದ್ದೀನ್, ಸಿಡಿಪಿಒ ಯಲ್ಲಮ್ಮ ಹಂಡಿ, ನ್ಯಾಯಾಂಗ ಇಲಾಖೆ ಸಿಬ್ಬಂದಿ ಸುನೀಲ್ ಮಠ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.