

ಕುಷ್ಟಗಿ: ಮುಖ್ಯಶಿಕ್ಷಕಿ ಅಮಾನತು ಮಾಡಿರುವುದನ್ನು ಖಂಡಿಸಿ ಎಸ್ಡಿಎಂಸಿ ಸದಸ್ಯರು ಹಾಗೂ ಪಾಲಕರು ಮಕ್ಕಳೊಂದಿಗೆ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಪ್ರತಿಭಟನೆ ಮಂಗಳವಾರ ನಡೆಸಿದರು.
ಬಿಜಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಕ್ಕಳು ಅಸ್ವಸ್ಥರಾಗುವಂತರಾಗಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ತಗೆದು ಹಾಕಿದರೆ ಯಾರೂ ಪ್ರಶ್ನಿಸುವುದಿಲ್ಲ. ಮುಖ್ಯ ಶಿಕ್ಷಕಿಯನ್ನು ಸೇವೆಯಿಂದ ಅಮಾನತುಗೊಳಿಸಿ ಹೊರಡಿಸಿರುವ ಆದೇಶ ಹಿಂಪಡೆಯುವರೆಗೆ ಪ್ರತಿಭಟನೆ ಮಾಡಲಾಗುವುದು. ಶಾಲೆಗೆ ಬೀಗ ಹಾಕಿದ್ದರಿಂದ ಮಕ್ಕಳು ಶಾಲೆಯ ಆವರಣದಲ್ಲಿ ಕುಳಿತು ಮುಖ್ಯ ಶಿಕ್ಷಕಿಯ ಪರ ಘೋಷಣೆ ಕೂಗಿದ್ದಲ್ಲದೆ ಮುಖ್ಯಶಿಕ್ಷಕಿ ಶಾಲೆಗೆ ಬರುವ ವರೆಗೆ ಶಾಲೆಗೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಭೇಟಿ ನೀಡಿದ ಅಕ್ಷರ ದಾಸೋಹ ಅಧಿಕಾರಿ ಕೆ.ಶರಣಪ್ಪ ಮಕ್ಕಳ ಹಾಗೂ ಪಾಲಕರ ಮನವೊಲಿಸುವ ಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ ಬಿಇಒ, ಡಿಡಿಪಿಐ ಭೇಟಿ ನೀಡಿ ಮುಖ್ಯ ಶಿಕ್ಷಕಿಯ ಅಮಾನತು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಕಲಕೇರಿ, ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ್, ಪ್ರಮುಖರಾದ ಪ್ರಕಾಶ ಬಡಿಗೇರ, ಶರಣಪ್ಪ ಗುಳೇದಗುಡ್ಡ, ಮಂಜಪ್ಪ ತಳುವಗೇರಿ, ರುದ್ರಯ್ಯ ಹಿರೇಮಠ, ಶರಣಪ್ಪ ವಡ್ಡರ್, ಮಹಾಂತೇಶ ಇತರರಿದ್ದರು.