ಶಾಲಾ ಸಮಯಕ್ಕೆ ಬಸ್ ಬಿಡಿ: ಕುಷ್ಟಗಿ ಡಿಪೋ ಮುಂದೆ ನಿಡಶೇಸಿ ಗ್ರಾಮದ ವಿದ್ಯಾರ್ಥಿಗಳ ಪ್ರತಿಭಟನೆ

150922 Kushtagi Nidasheshi Students Protest
Published on

ಕುಷ್ಟಗಿ: ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ನಿಡಶೇಸಿ ಗ್ರಾಮದ ವಿದ್ಯಾರ್ಥಿಗಳು ಪಟ್ಟಣದ ಸಾರಿಗೆ ಘಟಕಕ್ಕೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದಿಂದ ಕಾಲ್ನಡಿಗೆಯಲ್ಲಿ ಹೊರಟ ವಿದ್ಯಾರ್ಥಿಗಳು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಘೋಷಣೆ ಕೂಗುತ್ತ ಸಾರಿಗೆ ಘಟಕ ತಲುಪಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಿಂದ ತಳುವಗೇರಾ ಪ್ರೌಢಶಾಲೆಗೆ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳುತ್ತಿದ್ದೇವೆ. ಕುಷ್ಟಗಿಯಿಂದ ಬರುವ ಬಸ್‌ಗಳು ಭರ್ತಿಯಾಗಿ ಬರುತ್ತಿದ್ದು, ನಾವು ಜೋತು ಬಿದ್ದು ಪ್ರಯಾಣಿಸಬೇಕು. ಇಂತಹ ಪ್ರಯಾಸದ ಪ್ರಯಾಣಕ್ಕೆ ಅಂಜಿ ಕುಳಿತರೆ ತರಗತಿ ಸಮಯಕ್ಕೆ ತೆರಳಲು ಸಾಧ್ಯವಾಗುವುದಿಲ್ಲ.

ಶೈಕ್ಷಣಿಕ ವರ್ಷ ಆರಂಭದಿಂದಲ್ಲೂ ಸಮಸ್ಯೆ ಇದ್ದರೂ ಸಾರಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಕೂಡಲೇ ನಿಡಶೇಸಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆ ಸಮಯಕ್ಕೆ ಸರಿಯಾಗಿ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಗ್ರಾಮಕ್ಕೆ ಸಿಬ್ಬಂದಿ ಕಳುಹಿಸಿ ವಾಸ್ತವ ಅರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಘಟಕ ವ್ಯವಸ್ಥಾಪಕ ಜಡೇಶ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net