ಪಿಡಿಒ, ಇಂಜಿನಿಯರ್‌ರಿಂದ ದಂಡ ವಸೂಲಿಗೆ ಆದೇಶ!

Kustagi notice
ಅವ್ಯವಹಾರ ಹಣದ ವಸೂಲಾತಿಯ ಆದೇಶ ಪ್ರತಿ.
Published on

ವಿಶ್ವನಾಥ ಸೊಪ್ಪಿಮಠ

ಕುಷ್ಟಗಿ: ಗ್ರಾಮೀಣ ಭಾಗದ ರೈತರಿಗೆ ಉದ್ಯೋಗ ನೀಡಿ ಗುಳೆ ಹೋಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಾಧಿಕಾರಿಗಳ ಅವ್ಯವಹಾರಕ್ಕೆ ಹಳ್ಳ ಹಿಡಿಯುತ್ತಿದೆ.

ತಾಲೂಕಿನ ಸಂಗನಾಳ ಗ್ರಾಪಂ ವ್ಯಾಪ್ತಿಯಲ್ಲಿ ಇಂಥದ್ದೊಂದು ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದ್ದು, ದುರ್ಬಳಕೆಯಾಗಿರುವ ಹಣವನ್ನು ಅವ್ಯವಹಾರದಲ್ಲಿ ಭಾಗಿಯಾಗಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಸಹಾಯಕ ಇಂಜಿನಿಯರ್‌ರಿಂದ ವಸೂಲಿ ಮಾಡುವಂತೆ ಜಿಪಂ ಒಂಬುಡ್ಸಪರ್ಸನ್ ವೀರಣ್ಣ ಕಾಮತ್ ಜಿಪಂ ಸಿಇಒಗೆ ಶಿಫಾರಸು ಮಾಡಿದ್ದಾರೆ.

ಗಂಗಾವತಿಯ ಎಸ್.ಎಚ್.ಮುಧೋಳ ಅವರು ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಜಿಪಂ ಒಂಬುಡ್ಸಪರ್ಸನ್‌ವೀರಣ್ಣ ಕಮತರ್, ಅವ್ಯವಹಾರ ಸಾಬೀತಾದ ಹಿನ್ನೆಲೆ ದುರ್ಬಳಕೆಯಾದ 7.16 ಲಕ್ಷ ರೂ.ಗಳನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮಂತ ರಾಯ್ ಹಾಗೂ ಸಹಾಯಕ ಇಂಜಿನಿಯರ್ ನೀಲಕಂಠ ಗೋಟೂರರಿಂದ ತಲಾ 3.74 ಲಕ್ಷ ರೂ.ವಸೂಲಿಗೆ ಆದೇಶಿಸಿದ್ದಾರೆ.

2023-24ನೇ ಸಾಲಿನ ನರೇಗಾ ಯೋಜನೆ ಅಡಿ ಸಂಗನಾಳ ಗ್ರಾಪಂ ವ್ಯಾಪ್ತಿಯ ಮೆತ್ತಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಶಾಲೆಗೆ ಕಾಂಪೌಂಡ್ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಒಟ್ಟು 9.99 ಲಕ್ಷ ರೂ. ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಬೇಕಿತ್ತು. ಯೋಜನೆಯಂತೆ ಕೂಲಿಕಾರರಿಗೆ 1.89 ಲಕ್ಷ ರೂ. ಪಾವತಿಸಲು ಅವಕಾಶ ಇದ್ದಾಗ್ಯೂ ಕೇವಲ 12 ಕೂಲಿ ಕಾರ್ಮಿಕರನ್ನು ಒಂದೇ ದಿನ ಬಳಕೆ ಮಾಡಿಕೊಂಡು 4017ರೂ. ಪಾವತಿಸಿ ನಿಯಮ ಉಲ್ಲಂಘಿಸಿದ್ದಲ್ಲದೆ ಕಾಮಗಾರಿ ನಿರ್ವಹಿಸಲಾಗಿದೆ ಎಂದು ಬೋಗಸ್ ಬಿಲ್ ಸೃಷ್ಟಿಸಿ ಸಾಮಗ್ರಿ ಪೂರೈಕೆ ನೆಪದಲ್ಲಿ 7.16ಲಕ್ಷ ರೂ.ಗಳನ್ನು ವೆಂಡರ್‌ಗೆ ಬಟವಡೆ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವುದು ತನಿಖೆ ವೇಳೆ ಸಾಬೀತಾಗಿದೆ.

ಪಟ್ಟಿಯಲ್ಲಿ ದಿನ ಮಾಯ !

ಸಾಮಗ್ರಿ ವೆಚ್ಚ ಬಟವಡೆ ಮಾಡುವ ಪೂರ್ವದಲ್ಲಿ ಶೇ.90 ಕೂಲಿ ಮೊತ್ತ ಬಟವಡೆ ಮಾಡಬೇಕೆಂಬ ನಿಯಮ ಉಲ್ಲಂಘಿಸಲಾಗಿದೆ. 301ರಿಂದ 308ರ ವರೆಗಿನ ಕ್ಯಾಶ್ ಬಿಲ್ ಗಳ ಮೂಲಕ ಸಾಮಗ್ರಿ ವೆಚ್ಚ ಪಾವತಿಸಿರುವ ಬಗ್ಗೆ ದಾಖಲೆಯಲ್ಲಿ ತಿಳಿಸಿರುವ ಗ್ರಾಪಂ ಅಧಿಕಾರಿಗಳು, ತನಿಖೆ ವೇಳೆ ಕೇವಲ ಮೂರು ಬಿಲ್ ಗಳನ್ನು ಹಾಜರುಪಡಿಸಿದ್ದಾರೆ. ಲಭ್ಯ ಬಿಲ್ಗಳಲ್ಲಿಯೂ ಸಾಮಗ್ರಿ ಹೆಸರು, ದರ, ಮೊತ್ತ ಇತ್ಯಾದಿ ದಾಖಲಿಸದಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ ಸಾಮಗ್ರಿ ಖರೀದಿಗಾಗಿ ಕೈಗೊಂಡ ಪ್ರಕ್ರಿಯೆಯ ಮೂಲ ದಾಖಲೆಗಳನ್ನು ಪರಿಶೀಲಿಸಲಾಗಿ ದರಪಟ್ಟಿ ಪ್ರಕಟಣೆ, ಕೊಟೇಶನ್ಸ್ ಹಾಗೂ ತುಲನಾತ್ಮಕ ಪಟ್ಟಿಗಳಲ್ಲಿ ಯಾವುದೇ ದಿನಾಂಕಗಳಿಲ್ಲದಿರುವುದು ಕಂಡುಬಂದಿದೆ. ಲಭ್ಯವಿರುವ ಕೇವಲ ಮೂರು ಕೊಟೇಶನ್‌ಗಳಲ್ಲಿ ವೆಂಡರ್‌ಗಳ ಸಹಿ ಇರದೇ ಇರುವುದು ಅಚ್ಚರಿ ಮೂಡಿಸಿದೆ. ಸದರಿ ಕೊಟೇಶನ್‌ಗಳ ಮೇಲೆ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಸಹಿ ಮಾಡಿರುವುದು ನಿಯಮ ಬಾಹಿರ. ದಿನಾಂಕಗಳಿರದ ಹಾಗೂ ವೆಂಡರ್‌ದಾರರ ಸಹಿಗಳಿರದ ಬಿಲ್, ಕೊಟೇಶನ್ ಗಳು ಕರ್ನಾಟಕ ಆರ್ಥಿಕ ನಿಯಮಗಳ ಸ್ಪಷ್ಟ ಉಲ್ಲಂಘನೆಗೆ ಸಾಕ್ಷಿಯಾಗಿವೆ. ವಿಚಾರಣೆ ದಿನದಂದು ಹಾಜರಿದ್ದ ಹಾಲಿ ಪಿಡಿಒ ಕವಿತಾ ಪಾಟೀಲ್ ಹಾಗೂ ಕಾಮಗಾರಿ ಅನುಷ್ಠಾನಗೊಳಿಸಿದ ಪಿಡಿಒ ಹನುಮಂತರಾಯ ಲೋಪ ದೋಷಗಳನ್ನು ಪುಷ್ಟೀಕರಿಸುವಂತೆ ಲಿಖಿತ ಹೇಳಿಕೆ ನೀಡಿರುತ್ತಾರೆ ಎಂದು ತನಿಖೆ ಕೈಗೊಂಡ ಒಂಬುಡ್ಸಪರ್ಸನ್ ವೀರಣ್ಣ ಕಮತರ್ ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net