

ಕುಷ್ಟಗಿ: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು.
ಪಟ್ಟಣದಲ್ಲಿ ರೈಲ್ವೆ ನಿಲ್ದಾಣಕ್ಕೆ ಬಸ್ ಸೇವೆಯ ಆರಂಭಕ್ಕೆ ಬುಧವಾರ ರಾತ್ರಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಭ್ರಮಾಚರಣೆ ವೇಳೆಯ ದುರ್ಘಟನೆ ನೋವನ್ನುಂಟು ಮಾಡಿದೆ. ಸರ್ಕಾರ ಪೂರ್ವನಿಯೋಜಿತ ಭದ್ರತೆ ಒದಗಿಸಬೇಕಿತ್ತು. ಪೊಲೀಸ್ ಇಲಾಖೆ ಸಲಹೆ ನೀಡಿದ್ದಾಗ್ಯೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಯಪೂರ್ವಕ ಮಾಡಿಸಿದ್ದಾರೆ.
ಜನಪ್ರಿಯ ಆಗಬೇಕೆಂಬ ಡಿ.ಕೆ.ಶಿವಕುಮಾರರ ಹುಚ್ಚಿಗೆ ಅಮಾಯಕ ಜೀವಗಳು ಬಲಿಯಾಗಿವೆ. ಕೂಡಲೇ ಸರ್ಕಾರ ಮೃತರ ಕುಟುಂಬಗಳಿಗೆ ಹೆಚ್ಚು ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಪುರಸಭೆ ಅಧ್ಯಕ್ಷ ಮಹಾಂತೇಶ ಕಾಲಬಾವಿ, ಸದಸ್ಯರಾದ ಜಿ. ಕೆ. ಹಿರೇಮಠ, ಕಲ್ಲೇಶ ತಾಳದ, ರಾಜೇಶ್ ಪತ್ತಾರ್, ಜಿಪಂ ಮಾಜಿ ಸದಸ್ಯ ಕೆ.ಮಹೇಶ ಇತರರಿದ್ದರು.