3ನೇ ವಾರ್ಡ್‌ಗೆ ಭೇಟಿ ನೀಡಿದ ಅಧಿಕಾರಿಗಳು

SABHE
ಕುಷ್ಟಗಿಯ 3ನೇ ವಾರ್ಡ್‌ಗೆ ಗುರುವಾರ ಸಂಜೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಿವಾಸಿಗಳೊಂದಿಗೆ ಚರ್ಚಿಸಿದರು. ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಮಾತನಾಡಿದರು. ತಹಸೀಲ್ದಾರ್ ರವಿ ಅಂಗಡಿ, ಗ್ರೇಡ್ 2 ತಹಸೀಲ್ದಾರ್ ಮುರುಳೀಧರ ಮುಕ್ತೇದಾರ, ಸಿಪಿಐ ಯಶವಂತ ಬಿಸನಳ್ಳಿ ಇತರರು ಇದ್ದರು.
Published on

ಕುಷ್ಟಗಿ: ಪಟ್ಟಣದ 3ನೇ ವಾರ್ಡ್‌ಗೆ ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗುರುವಾರ ಸಂಜೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ವಾರ್ಡ್‌ನಲ್ಲಿ ನನೆಗುದಿಗೆ ಬಿದ್ದಿರುವ ರಾಜಕಾಲುವೆ ನಿರ್ಮಾಣ ಕಾಮಗಾರಿ, ಉದ್ಯಾನ ಅಭಿವೃದ್ಧಿ, ಸಂಪರ್ಕ ರಸ್ತೆ ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಕಳೆದ 2ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿರುವ ನಿವಾಸಿಗಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದರು. ವಾರ್ಡ್‌ಗೆ ಭೇಟಿ ನೀಡಿದ ಅಧಿಕಾರಿಗಳು ನಿವಾಸಿಗಳೊಂದಿಗೆ ಕೆಲ ಗಂಟೆ ಚರ್ಚಿಸಿ ಚುನಾವಣೆ ಮುಗಿಯುತ್ತಿದ್ದಂತೆ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಆರಂಭಿಸಿ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ವಾರ್ಡ್‌ನ ಮೂಲ ಸೌಕರ್ಯಕ್ಕಾಗಿ ಸಂಘ ರಚಿಸಿಕೊಂಡು ಹೋರಾಟ ಮಾಡುತ್ತ ಬಂದಿದ್ದೇವೆ. ಯಾವೊಬ್ಬ ಅಧಿಕಾರಿಗಳೂ ಸ್ಪಂದಿಸಿಲ್ಲ. ಮಾಜಿ ಹಾಗೂ ಹಾಲಿ ಶಾಸಕರೂ ವಾರ್ಡ್‌ನ ಸಮಸ್ಯೆಗೆ ಕಿವಿಗೊಡದೆ ಉದಾಸೀನ ತೋರುತ್ತಿದ್ದಾರೆ. ಚುನಾವಣೆ ಇದೆ ಎಂಬ ಕಾರಣಕ್ಕೆ ಹುಸಿ ಭರವಸೆ ನೀಡಿದರೆ ನಡೆಯುವುದಿಲ್ಲ. ನಂತರವೂ ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ ಎಂದು ವಾರ್ಡ್‌ನ ನಿವಾಸಿಗಳಾದ ಅಭಿನಂದನ್ ಗೋಗಿ, ಎ.ವೈ.ಲೋಕರೆ, ಬಸವರಾಜ ಗಾಣಿಗೇರ, ಡಾ.ಬಾಬು ಇತರರು ಎಚ್ಚರಿಸಿದರು.

ಬೇಡಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಸೇರಿ ಕಾರ್ಯನಿರ್ವಹಿಸಬೇಕಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ, ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿ ವೇಳೆ ಅತಿಕ್ರಮ ತೆರವಿಗೆ ನಿವಾಸಿಗಳು ಸಹಕರಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಮನವಿ ಮಾಡಿದರು.

ತಹಸೀಲ್ದಾರ್ ರವಿ ಅಂಗಡಿ, ಗ್ರೇಡ್ 2 ತಹಸೀಲ್ದಾರ್ ಮುರುಳೀಧರ ಮುಕ್ತೇದಾರ, ಲೋಕೋಪಯೋಗಿ ಇಲಾಖೆಯ ಎಇಇ ಎ.ರಾಜಪ್ಪ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಮುದ್ದುರಂಗಸ್ವಾಮಿ ಹಾಗೂ ಭೂಮಾಪನ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ವಾರ್ಡ್‌ನ ನಿವಾಸಿಗಳು ಸ್ವಂತ ಖರ್ಚಿನಲ್ಲಿ ರಸ್ತೆ ಸಮತಟ್ಟು ಮಾಡಿಕೊಂಡು ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ ಬಗ್ಗೆ ವಿಜಯವಾಣಿ ಏ.17ರಂದು ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net