

ಕುಷ್ಟಗಿ: ಪಟ್ಟಣದ ಸರ್ಕೀಟ್ ಹೌಸ್‌ನಲ್ಲಿ ಶುಕ್ರವಾರ ತಾಪಂ ಇಒ ಶಿವಪ್ಪ ಸುಬೇದಾರ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಜೆಜೆಎಂ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಗ್ರಾಪಂ ಪಿಡಿಒಗಳು ಯೋಜನೆ ಅರೆಬರೆ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತೋಪಲಕಟ್ಟಿ ಗ್ರಾಮದಲ್ಲಿ ಮೇಲ್ಭಾಗದಲ್ಲೇ ಪೈಪ್‌ಗಳನ್ನು ಅಳವಡಿಸಿರುವುದರಿಂದ ಹಾಳಾಗುತ್ತಿವೆ. ನಳ ಸಂಪರ್ಕ ಕಾರ್ಯವೂ ಪೂರ್ಣಗೊಂಡಿಲ್ಲ. ಅಡವಿಬಾವಿಯಲ್ಲಿ ಇದೀಗ ಕಾಮಗಾರಿ ಆರಂಭಿಸಲಾಗಿದೆ. ಚಳಗೇರಾದಲ್ಲಿ 1492 ಮನೆಗಳ ಪೈಕಿ ಸಾವಿರ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ದೋಟಿಹಾಳದಲ್ಲಿ ಪೈಪ್‌ಲೈನ್ ಕಾಮಗಾರಿಯೂ ನಡೆದಿಲ್ಲ. ಹೊಸ ಮೇಲ್ತೊಟ್ಟಿ (ಒಎಚ್‌ಟಿ)ಗಳಿಗೆ ಇನ್ನೂ ನೀರು ಪೂರೈಕೆಯಾಗಿಲ್ಲ. ಹಿರೇಮನ್ನಾಪುರ ಗ್ರಾಪಂ ವ್ಯಾಪ್ತಿಯಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ. ಹಂಚಿನಾಳದಲ್ಲಿ 260 ಪೈಕಿ 170 ಮನೆಗಳಿಗೆ ಮಾತ್ರ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಕನಕೊಪ್ಪ ಗ್ರಾಮದಲ್ಲಿ ಅಳವಡಿಸಿರುವ ನಳಗಳು ಕಿತ್ತು ಹೋಗಿವೆ. ಹೀಗೆ ಪ್ರತಿ ಗ್ರಾಪಂ ಪಿಡಿಒಗಳು ಅರಬರೆ ಕಾಮಗಾರಿ ಕುರಿತು ಪ್ರಸ್ತಾಪಿಸಿದರು. ಕಾಮಗಾರಿ ಅಪೂರ್ಣಗೊಳಿಸಿ ಹೋದವರು ಈವರೆಗೆ ಕಾಲಿಟ್ಟಿಲ್ಲ. ಕರೆ ಮಾಡಿದರೆ ಇಂಜಿನಿಯರ್‌ಗಳು ಕರೆ ಸ್ವೀಕರಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಇಒ ತರಾಟೆ: ಜೆಜೆಎಂ ಕಾಮಗಾರಿ ಈಗಾಗಲೇ ಪೂರ್ಣಗೊಂಡು ಪ್ರತಿ ಮನೆಗೆ ನೀರು ಪೂರೈಕೆಯಾಗಬೇಕಿತ್ತು. ಗ್ರಾಪಂಗೆ ವಹಿಸಿದ್ದರೆ ಇಷ್ಟೊತ್ತಿಗಾಗಲೆ ಯೋಜನೆ ಸಮರ್ಪಕ ಅನುಷ್ಠಾನವಾಗುತ್ತಿತ್ತು. ಒಂದು ಗ್ರಾಮದಲ್ಲಿ ಕಾಮಗಾರಿ ಮುಗಿಯುವವರೆಗೆ ಬೇರೆ ಊರಲ್ಲಿ ಕೆಲಸ ಆರಂಭಿಸಬಾರದು. ಏಕಕಾಲಕ್ಕೆ ಅಲ್ಲಲ್ಲಿ ಒಂದೊಂದಿಷ್ಟು ಕಾಮಗಾರಿ ನಡೆಸಿದ್ದರಿಂದಲೇ ಯೋಜನೆ ಹಳ್ಳ ಹಿಡಿದಿದೆ ಎಂದು ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ವಿಲಾಸ್ ಹಾಗೂ ಶಾಖಾಧಿಕಾರಿಗಳನ್ನು ತಾಪಂ ಇಒ ಶಿವಪ್ಪ ಸುಬೇದಾರ್ ತರಾಟೆಗೆ ತಗೆದುಕೊಂಡರು. ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ-ಅಂಗನವಾಡಿ ಕೇಂದ್ರ ಹಾಗೂ ಗ್ರಾಪಂಗೆ ಮೊದಲ ಆದ್ಯತೆ ನೀಡಬೇಕೆಂಬ ನಿಯಮ ಇದ್ದರೂ ಗಾಳಿಗೆ ತೂರಲಾಗಿದೆ. ಹಿರೇಮನ್ನಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಪೈಪ್‌ಲೈನ್‌ಗಾಗಿ ಸಿಸಿ ರಸ್ತೆ ಕಿತ್ತು ಹಾಕಿ ಕೈಬಿಡಲಾಗಿದೆ. ಗ್ರಾಮಸ್ಥರು ರಸ್ತೆಗೆ ಕಲ್ಲು ಇಟ್ಟಿದ್ದಾರೆ. ಅಲ್ಲಿಗೆ ಭೇಟಿ ನೀಡಿದಾಗ ನಿಮ್ಮ ವಾಹನಕ್ಕೇ ಘೇರಾವು ಹಾಕುತ್ತೇವೆಂದು ಜನ ಹೇಳುತ್ತಿದ್ದಾರೆ. ಅನುದಾನ ಕೊರತೆ ಇದ್ದರೆ ಶಾಸಕರು ಅನುದಾನ ನೀಡುವುದಾಗಿ ಹೇಳಿದ್ದಾರೆ. ಕಾಮಗಾರಿ ಕುರಿತು ಕೇಳಿದರೆ ಜನಪ್ರತಿನಿಧಿಗಳಿಗೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.