ಆಡಂಬರಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ಇರಲಿ

PRATHIBHA KARANJI
ಕುಷ್ಟಗಿಯ ಪಿಸಿಎಚ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು. ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಬಿಇಒ ಸುರೇಂದ್ರ ಕಾಂಬಳೆ ಇತರರು ಇದ್ದರು.
Published on

ಕುಷ್ಟಗಿ: ಆಡಂಬರದ ಬದಲು ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದಾಗಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಲೀಲ್ ಹೇಳಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗಾಗಿ ಪಟ್ಟಣದ ಪಿಸಿಎಚ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಸಜ್ಜಿತ ಕಟ್ಟಡ, ವಿವಿಧ ಸೌಕರ್ಯಗಳು ಶಾಲೆಯಲ್ಲಿದ್ದ ಮಾತ್ರಕ್ಕೆ ಮಕ್ಕಳು ಕಲಿಯುವುದಿಲ್ಲ. ಅವರ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ಬೋಧಿಸುವ ಹಾಗೂ ಕಲಿಕೆಯಲ್ಲಿ ಆಸಕ್ತಿ ಉಂಟಾಗುವಂತೆ ಶಿಕ್ಷಕರು ಕಾರ್ಯನಿರ್ವಹಿಸಬೇಕಿದೆ. ಆ ಮೂಲಕ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನು ಆಕರ್ಷಿಸಬೇಕಿದೆ. ಪಠ್ಯದ ಜತೆಗೆ ಜೀವನ ಕ್ರಮ ಹಾಗೂ ಮಾನವೀಯ ಮೌಲ್ಯಗಳ ಶಿಕ್ಷಣ ನೀಡಬೇಕಿದೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕಿದೆ ಎಂದರು.

ಮಾಜಿ ಶಾಸಕ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿವೆ ಎಂದರು.

ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಸಾವಿರಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದಾರೆ. ವಿಜೇತರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.

ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಕುದರಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ, ಪುರಸಭೆ ಸದಸ್ಯ ವಸಂತಪ್ಪ ಮೇಲಿನಮನಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನೀಲನಗೌಡ್ರ ಹೊಸಗೌಡ್ರ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಮಹಾದೇವಪ್ಪ ಗೊಣ್ಣಾಗರ, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಜಗದೀಶ ಸೂಡಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ವಿದ್ಯಾ ಕಂಪಾಪುರಮಠ, ಸಿಆರ್‌ಪಿ, ಬಿಆರ್‌ಪಿ ಸಂಘದ ಅಧ್ಯಕ್ಷ ಸೋಮಲಿಂಗಪ್ಪ ಗುರಿಕಾರ, ದೈಹಿಕ ಶಿಕ್ಷಣ ಪರಿವೀಕ್ಷಕಿ ಸರಸ್ವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net