

ಕುಷ್ಟಗಿ: ಪಟ್ಟಣ ಹೊರವಲಯದ ರೈಲು ನಿಲ್ದಾಣಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಒತ್ತಾಯಿಸಿ ಕುಷ್ಟಗಿ-ನರಗುಂದ-ಘಟಪ್ರಭಾ ರೈಲ್ವೆ ಹೋರಾಟ ಸಮಿತಿ ಹಾಗೂ ಇನ್ನರ್ ವೀಲ್ಹ್ ಕ್ಲಬ್ ಸದಸ್ಯರು ಸಿಪಿಐ ಯಶವಂತ ಬಿಸನಳ್ಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಬೆಳಗ್ಗೆ ಹುಬ್ಬಳ್ಳಿಗೆ ತೆರಳುವ ರೈಲು ರಾತ್ರಿ ಹಿಂತಿರುಗುವುದರಿಂದ ಮಧ್ಯದ ಅವಧಿಯಲ್ಲಿ ಕಿಡಗೇಡಿಗಳು ರೈಲು ನಿಲ್ದಾಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಅಲ್ಲದೆ ರಾತ್ರಿ ಹೊತ್ತು ರೈಲಿನಿಂದ ಇಳಿದು ಬರುವ ಒಂಟಿ ಮಹಿಳೆಯರು ಆತಂಕದಲ್ಲಿ ಓಡಾಡುವಂತಾಗಿದೆ. ನಿಲ್ದಾಣದಲ್ಲಿ ಪೊಲೀಸರ ನಿಯೋಜನೆ ಮಾಡಿ ಗಸ್ತು ತಿರುಗುವಂತೆ ಸೂಚಿಸಿದರೆ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದು ಮನವಿ ಮಾಡಿದರು.
ರೈಲ್ವೆ ಹೋರಾಟ ಸಮಿತಿಯ ವೀರೇಶ ಬಂಗಾರಶೆಟ್ಟರ್, ಭರತೇಶ್ ಜೋಷಿ, ಮಂಜುನಾಥ ಮಹಾಲಿಂಗಪುರ, ಇನ್ನರ್ ವೀಲ್ಹ್ ಕ್ಲಬ್ ಅಧ್ಯಕ್ಷೆ ವಂದನಾ ಗೋಗಿ, ಶಾರದಾ ಶೆಟ್ಟರ್ ಇದ್ದರು.