ರೈತನಿಗೆ ದಂಡ ಹಾಕಿದ್ದಕ್ಕೆ ಶಾಸಕ ಬಯ್ಯಪುರ ಗರಂ

Bayyapura Class Police
ಕುಷ್ಟಗಿಯ ಮಾರುತಿ ವೃತ್ತದಲ್ಲಿ ರೈತನಿಗೆ ದಂಡ ಹಾಕಿದ್ದಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಂಗಳವಾರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Published on

ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದಲ್ಲಿ ಮಂಗಳವಾರ ಪೊಲೀಸ್ ಕಾನ್ಸ್‌ಟೇಬಲ್ ರೈತನಿಗೆ ದಂಡ ಹಾಕಿದ್ದು, ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅವರನ್ನು ಕೆರಳಿಸಿತು.

ರೈತ ಆರೋಗ್ಯ ಕಾರ್ಡ್ ಮಾಡಿಸುವುದಕ್ಕಾಗಿ ಆಸ್ಪತ್ರೆಗೆ ಹೋಗುತ್ತಿರುವುದಾಗಿ ಹೇಳಿದರೂ ಕಾನ್ಸ್‌ಟೇಬಲ್ ದಂಡ ಹಾಕಿದ್ದಾರೆ. ರೈತ ಕೂಡಲೇ ಶಾಸಕರಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಕಾನ್ಸ್‌ಟೇಬಲ್ ಶಾಸಕರಿಗಾದರೂ ಹೇಳು, ಯಾರಿಗಾದರೂ ಹೇಳು ದಂಡ ಕಟ್ಟಿ ಹೋಗು ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದನ್ನು ಶಾಸಕ ಬಯ್ಯಪುರ ಕೇಳಿಸಿಕೊಂಡಿದ್ದಾರೆ. ಇದರಿಂದಾಗಿ ಕೂಡಲೇ ಸ್ಥಳಕ್ಕೆ ಧಾವಿಸಿ ರೈತನಿಂದ ಮಾಹಿತಿ ಪಡೆದಿದ್ದಾರೆ.

ಬಳಿಕ ಶಾಸಕ ಬಯ್ಯಪುರ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳರನ್ನು ಕರೆಯಿಸಿ ಕಾನ್ಸ್‌ಟೇಬಲ್ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲರೂ ಅನಗತ್ಯ ತಿರುಗಾಡುವುದಿಲ್ಲ. ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಶಾಸಕರೆಂಬ ಗೌರವವೂ ಇಲ್ಲದೆ ಕಾನ್ಸ್‌ಟೇಬಲ್ ಹಗುರವಾಗಿ ಮಾತನಾಡಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ. ಮಾಸ್ಕ್ ಇಲ್ಲದ, ಪರಸ್ಪರ ಅಂತರ ಕಾಯ್ದುಕೊಳ್ಳದ ಹಾಗೂ ಅನಗತ್ಯ ತಿರುಗಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಆದರೆ, ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net