

ಕುಷ್ಟಗಿ: ಹಿರಿಯ ಸಾಹಿತಿ, ಬರಹಗಾರರ ಕೃತಿಗಳನ್ನು ಓದುವ ಮೂಲಕ ಯುವ ಬರಹಗಾರರು ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಭಾನುವಾರ ಮೊಹಾಲಿಯ ಪ್ರಕಾಶನ ಯುವ ಸಾಹಿತಿ ರಜಿಯಾ ಬಾವಿಕಟ್ಟಿ ರಚಿತ ‘ಅಂಕುರ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಸಾಹಿತಿ ಆಗಬೇಕು ಎನ್ನುವವರು ಮೊದಲು ಬರೆಯುವುದನ್ನು ಕಲಿಯಬೇಕು. ಸಮಾಜದ ಸದ್ಯದ ಸ್ಥಿತಿಗತಿ ಹಾಗೂ ಜನರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಸಾಹಿತ್ಯದ ಮೂಲಕ ಮಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್ ಮಾತನಾಡಿ, ಯುವ ಬರಹಗಾರರು ಸಮಾಜಮುಖಿ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಬೇಕಿದೆ. ಅಂತಹವರಿಗೆ ಪೂರಕ ವಾತಾವರಣ ಹಾಗೂ ಪ್ರೋತ್ಸಾಹಿಸುವ ಕಾರ್ಯವನ್ನು ಸಾಹಿತ್ಯ ಪರಿಷತ್ ಮಾಡಲಿದೆ ಎಂದರು.
ವಕೀಲ ಶ್ರೀನಿವಾಸ ನರಗುಂದ, ಸಾಹಿತಿ ಅಮೀನ್ ಅತ್ತರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕಿಶನ್‌ರಾವ್ ಕುಲಕರ್ಣಿ, ಸಾಹಿತಿ ಜಹಾನ್ ಆರಾ ಕೋಳೂರು ಮಾತನಾಡಿದರು. ಚಾಮರಾಜನಗರದ ಯುವ ಸಾಹಿತಿ ಕೆ.ಶ್ರೀಧರ, ರಾಜ್ಯ ಕರುನಾಡ ಹಣತೆ ಕವಿಬಳಗದ ವೈ.ಜೆ.ಮೆಹಬೂಬ, ರಂಗ ಕಲಾವಿದ ಇಮಾಮ್‌ಸಾಬ್ ಕೋಳೂರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶರಣಪ್ಪ ವಡಿಗೇರಿ, ಸಾಹಿತಿಗಳಾದ ಡಾ.ಕೆ.ಶರಣಪ್ಪ ನಿಡಶೇಸಿ, ಪ್ರಮೋದ ತುರ್ವಿಹಾಳ್, ತಾಜುದ್ದೀನ್ ದಳಪತಿ ಸಲ್ಮಾ ಹುಡೇದ್, ಮೌನೇಶ ಬಡಿಗೇರ ಇತರರಿದ್ದರು.