

ಕುಷ್ಟಗಿ: ವೈದ್ಯರು ಇಚ್ಛಾಶಕ್ತಿಯಿಂದ ಕೆಲಸ ಮಾಡುವ ಮೂಲಕ ಜನರ ಆರೋಗ್ಯ ಕಾಪಾಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ವೈದ್ಯರ ಇಚ್ಛಾಶಕ್ತಿ ಕೊರತೆಯಿಂದ ಉತ್ತಮ ಸೇವೆ ಲಭ್ಯವಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ. ಹೀಗಾಗಿ ರೋಗಿಗಳು ದೂರದ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ. ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸಿದರೆ ಸಿಬ್ಬಂದಿಯೂ ಪಾಲಿಸುತ್ತಾರೆ. ಇದರಿಂದ ಆಸ್ಪತ್ರೆಗೂ ಹೆಸರು ಬರುತ್ತದೆ. ಇದಕ್ಕೆ ಗಂಗಾವತಿಯ ಆಸ್ಪತ್ರೆ ಹಾಗೂ ಅಲ್ಲಿನ ವೈದ್ಯರು ಮಾದರಿ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ರವೀಂದ್ರನಾಥ ಮಾತನಾಡಿ, ಸ್ಕ್ಯಾನಿಂಗ್ ಮಾಡಿಸುವ ನೆಪದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಬೇಡ ಎಂದು ಸಲಹೆ ನೀಡಿದರು. ಡಿಎಚ್‌ಒ ಡಾ.ಅಲಕಾನಂದಾ ಮಳಗಿ ಮಾತನಾಡಿ, ಜನರು ಆರೋಗ್ಯ ಮೇಳದ ಸದುಪಯೋಗದ ಜತೆಗೆ ದೂರದ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಬದಲು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದುರ. ಟಿಎಚ್‌ಒ ಆನಂದ್ ಗೋಟೂರು ಮಾತನಾಡಿ, ಗಂಭೀರ ಕಾಯಿಲೆ ಹಾಗೂ ಶಸ್ತ್ರಚಿಕಿತ್ಸೆಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಸಹಕಾರಿಯಾಗಿದೆ. ಕಾರ್ಡ್ ಪಡೆದು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.