

ಕುಷ್ಟಗಿ: ಶಿವಶರಣೆಯಂತೆ ಬದುಕು ನಡೆಸಿದ್ದ ನಿಡಶೇಸಿ ಗ್ರಾಮದ ಶಿವಮ್ಮ ಸಜ್ಜನ್ (70) ಶುಕ್ರವಾರ ಗೂಡ್ಸ್ ವಾಹನ ಪಲ್ಟಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಟ್ಟಣದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ವಿವಾಹವಾದ ಕೆಲವೇ ದಿನಗಳಲ್ಲಿ ಸಾಂಸಾರಿಕ ಜೀವನ ತ್ಯಜಿಸಿ, ಪತಿಯ ಮರುವಿವಾಹಕ್ಕೂ ಅನುಮತಿ ನೀಡಿ ತನ್ನ ಬದುಕನ್ನು ಸೇವೆಗೆ ಮೀಸಲಿಟ್ಟಿದ್ದ ಈ ಶಿವಶರಣೆ, ಹಲವು ವರ್ಷಗಳ ಕಾಲ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೆಜ್ಜೆಬಾವಿಯ ನಿಡಶೇಸಿಯ ಚನ್ನಬಸವೇಶ್ವರ ಮಠದ ಶಾಖಾ ಮಠದಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಸ್ವಗ್ರಾಮಕ್ಕೆ ಮರಳಿದ ಅವರು ಅಲ್ಲಿಯೂ ಮಠಸೇವೆಯಲ್ಲಿ ನಿರತರಾಗಿದ್ದರು.
ಮಠದಿಂದ ದೊರಕುತ್ತಿದ್ದ ಮಾಸಿಕ 600 ರೂ. ನೆರವಿನಲ್ಲೇ ತೃಪ್ತರಾಗಿದ್ದ ಶಿವಮ್ಮ ಅವರು ವೃದ್ಧಾಪ್ಯ ವೇತನ, ಪಡಿತರ ಚೀಟಿ, ಗೃಹಲಕ್ಷ್ಮೀ ಹಣ ಸೇರಿದಂತೆ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ನಿರಾಕರಿಸಿದ್ದರು.
ನನಗೆ ಯಾವುದೂ ಬೇಡ, ಶೌಚಗೃಹ ಮಾತ್ರ ಬೇಕು ಎಂದು ಮನವಿ ಮಾಡಿದ ನಂತರ ಆ ಸೌಲಭ್ಯ ಮಾತ್ರ ಪಡೆದುಕೊಂಡಿದ್ದರು.
ವಚನ ಸಾಹಿತ್ಯ ಮತ್ತು ಅಧ್ಯಾತ್ಮದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಈ ಶಿವಶರಣೆ, ನಿರರ್ಗಳವಾಗಿ ವಚನಗಳನ್ನು ಪಠಿಸಿ ಅರ್ಥವನ್ನೂ ವಿವರಿಸುತ್ತಿದ್ದರು. ಮನೆಯ ಪುಟ್ಟ ಮೂಲೆಯಲ್ಲಿ ವಚನ ಸಾಹಿತ್ಯ ಮತ್ತು ಧಾರ್ಮಿಕ ಪುಸ್ತಕಗಳ ಸಂಗ್ರಹ ಮಾಡಿಕೊಂಡು ಸ್ವಚ್ಛತೆ, ಶಿಸ್ತು, ಉತ್ತಮ ಆಹಾರ ಪದ್ಧತಿಗೆ ಒತ್ತು ನೀಡುತ್ತಾ ಸದಾ ಆರೋಗ್ಯಕರ ಜೀವನ ನಡೆಸುತ್ತಿದ್ದರು.
=======
ಶಿವಮ್ಮ ಸಜ್ಜನ್ ಸ್ವಾವಲಂಬಿಯಾಗಿ ಬದುಕಿ, ಜೀವನ ಮೌಲ್ಯಗಳನ್ನು ಕಾಪಾಡಿಕೊಂಡ ಶಿವಶರಣೆ. ಗೃಹಲಕ್ಷ್ಮೀ ಹಣ ನಿರಾಕರಿಸಿ, ಶೌಚಗೃಹ ಮಾತ್ರ ನಿರ್ಮಿಸಿಕೊಡಿ ಎಂದು ಕೇಳಿಕೊಂಡಿದ್ದರು. ಅವರನ್ನು ಭೇಟಿ ಮಾಡಿದಾಗ ವಚನಗಳನ್ನು ನಿರರ್ಗಳವಾಗಿ ಹೇಳಿ ಅರ್ಥವನ್ನೂ ವಿವರಿಸುತ್ತಿದ್ದರು.
> ಅನ್ನಪೂರ್ಣ ಪಾಟೀಲ್, ಅಂಗನವಾಡಿ ಮೇಲ್ವಿಚಾರಕಿ