ನಾರಿ ಸುವರ್ಣ ಕುರಿ ತಳಿ ಸಂವರ್ಧನೆಗೆ ಅಡ್ಡಿ..!, ಕಾಮಗಾರಿಯ ಆರಂಭಿಕ ಹಂತದಲ್ಲೇ ವಿಘ್ನ

work disrupted
ಕುಷ್ಟಗಿ ತಾಲೂಕಿನ ನಿಲೋಗಲ್ ಹೊರವಲಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನಾರಿ ಸುವರ್ಣ ಕುರಿ ತಳಿ ಸಂವರ್ಧನಾ ಕೇಂದ್ರದ ಶೆಡ್ ಕಾಮಗಾರಿ ಅರ್ಧಕ್ಕೆ ನಿಂತಿರುವುದು.
Published on

ಕುಷ್ಟಗಿ: ಕೊಪ್ಪಳ ಜಿಲ್ಲೆಗೆ ನಾರಿ ಸುವರ್ಣ ಕುರಿ ತಳಿ ಸಂವರ್ಧನಾ ಕೇಂದ್ರ ಮಂಜೂರಾಗಿದ್ದು, ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಅಲ್ಲಿನ ಕೆಲ ರೈತರು ಅಡ್ಡಿಪಡಿಸುತ್ತಿರುವುದರಿಂದ ಕುರಿಗಾಹಿಗಳ ಆದಾಯ ದ್ವಿಗುಣಗೊಳಿಸುವ ಕುರಿ ತಳಿಯೊಂದರ ಸಂವರ್ಧನಾ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯ ಕಳೆದ 4ವರ್ಷದಿಂದ ನನೆಗುದಿಗೆ ಬಿದ್ದಿದೆ.

ನಾರಿ ಸುವರ್ಣ ಕುರಿ ತಳಿ ಸಂವರ್ಧನಾ ಕೇಂದ್ರ 2021ರಲ್ಲಿಯೇ ಮಂಜೂರಾಗಿದೆ. ಕುರಿ ಮತ್ತು ಉಣ್ಣೆ ನಿಗಮದಿಂದ 1ಕೋಟಿ ರೂ. ಅನುದಾನ ಮಂಜೂರಾಗಿ 60ಲಕ್ಷ ರೂ. ಈಗಾಗಲೇ ಬಿಡುಗಡೆಯಾಗಿದೆ. ಉದ್ದೇಶಿತ ಕೇಂದ್ರ ಸ್ಥಾಪನೆಗೆ ನಿಲೋಗಲ್ ಹೊರ ವಲಯದ ಸ.ನಂ.25ರ ಕಂದಾಯ ಜಮೀನು (ಗಾಯಾರಾಣ) ಗುರುತಿಸಿ ಜಮೀನಿನ 32.06ಎಕರೆಯಲ್ಲಿ 9.36ಎಕರೆ ಪ್ರದೇಶವನ್ನು ಕಾಯ್ದಿರಿಸಿ ಪಹಣಿ ಪತ್ರಿಕೆಯ ಕಾಲಂ 11ರಲ್ಲಿ ನಮೂದಿಸಲಾಗಿದೆ. ಹಲವು ವರ್ಷಗಳಿಂದ ಸದರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತ ಬಂದಿದ್ದೇವೆ ಎನ್ನುತ್ತಿರುವ ಅಲ್ಲಿನ ಕೆಲ ರೈತರು, ಜಮೀನು ಕಳೆದುಕೊಳ್ಳುವ ಭೀತಿಗೆ ಕೇಂದ್ರ ಸ್ಥಾಪನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕೇಂದ್ರದ ಕಟ್ಟಡ ಕಾಮಗಾರಿ ಆರಂಭಿಕ ಹಂತದಲ್ಲಿಯೇ ಸ್ಥಗಿತಗೊಂಡಿದೆ.

ನಾರಿ ಸುವರ್ಣ ಕುರಿ ತಳಿ ಸಂವಧರ್ರ್ನಾ ಕೇಂದ್ರಕ್ಕೆ ಗ್ರಾಮದ ಗಾಯರಾಣ ಜಮೀನನ್ನು ಗುರುತಿಸಿದ ಇಲ್ಲಿನ ತಹಸೀಲ್ದಾರರು ಕಂದಾಯ ನಿರೀಕ್ಷಕರ ವರದಿಯೊಂದಿಗೆ 2021ರ ಅ.18ರಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುತ್ತಾರೆ. ಕೇಂದ್ರ ಸ್ಥಾಪನೆಗೆ ಗಾಯರಾಣ ಜಮೀನು ಲಭ್ಯ ಇದ್ದು, ಅದರಲ್ಲಿ 20ಜನ ಸಾಗುವಳಿ ಮಾಡುತ್ತಿದ್ದಾರೆ. ಅನಧಿಕೃತ ಸಾಗುವಳಿದಾರರನ್ನು ತೆರವುಗೊಳಿಸುವುದು ಸೂಕ್ತ ಇರುತ್ತದೆ.

ನ್ಯಾಯಾಲಯದ 2005ರ ಆದೇಶದಂತೆ ಗಾಯರಾಣ, ಹುಲ್ಲುಬನ್ನಿ ಪ್ರದೇಶವನ್ನು ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಘ ಸಂಸ್ಥೆಗೆ ಮಂಜೂರು ಮಾಡಲು ಅವಕಾಶ ಇರುವುದಿಲ್ಲ. ಆದರೆ, ಗ್ರಾಮೀಣ ಸಮುದಾಯದ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರಿಸಲು ನಿರ್ದೇಶನವಿರುತ್ತದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ತಹಸೀಲ್ದಾರರ ವರದಿ ಆಧರಿಸಿ ಅಂದಿನ ಡಿಸಿ ಜಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿಲೋಗಲ್ ಗ್ರಾಮದ ಸ.ನಂ.25ರಲ್ಲಿನ 9.36ಎಕರೆ ಜಮೀನನ್ನು ನಾರಿ ಸುವರ್ಣ ಕುರಿ ತಳಿ ಸಂವರ್ಧನಾ ಕೇಂದ್ರ ಸ್ಥಾಪನೆಗೆ ಮೀಸಲಿರಿಸಿ ಪಹಣಿ ಪತ್ರಿಕೆಯ ಕಾಲಂ 11ರಲ್ಲಿ ನಮೂದಿಸುವಂತೆ 2021ರ ನ.24ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ತಳಿಯ ವಿಶೇಷತೆ ಏನು..?: ನಾರಿ ಸುವರ್ಣ ಕುರಿ ತಳಿ ರೈತರ ಆದಾಯ ದ್ವಿಗುಣಗೊಳಿಸಿ ಆರ್ಥಿಕ ಬಲವರ್ಧನೆಗೆ ನೆರವಾಗಬಲ್ಲ ತಳಿಯಾಗಿದೆ. ಬೇರೆ ತಳಿಗಳಿಗೆ ಹೋಲಿಸಿದರೆ ಈ ತಳಿ ವರ್ಷಕ್ಕೆ 3-4ಮರಿಗಳನ್ನು ನೀಡುತ್ತದೆ. ಬಿಸಿ ಮತ್ತು ಶುಷ್ಕ ಹವಾಮಾನಕ್ಕೆ ಹೊಂದಿಕೊಳ್ಳುವ ತಳಿ ಇದಾಗಿದ್ದು, ಸಾಕಣೆದಾರರಿಗೆ ಲಾಭದಾಯಕ ಆಯ್ಕೆಯಾಗಿದೆ ಎಂದು ಹೇಳಲಾಗುತ್ತಿದೆ.

ನಿಲೋಗಲ್ ಗ್ರಾಮದ ಹೊರವಲಯದಲ್ಲಿ ಸ.ನಂ.25ರ ಜಮೀನು ಫಲವತ್ತತೆಯಿಂದ ಕೂಡಿದೆ. ಪಕ್ಕದಲ್ಲಿಯೇ ಇರುವ 26ಎಕರೆ ಜಮೀನು(ಸ.ನಂ.24) ಸಹ ಗಾಯರಾಣ ಜಮೀನಾಗಿದ್ದು, ಸಾಗುವಳಿಗೆ ಯೋಗ್ಯವಿಲ್ಲ. ಸ.ನಂ.25ರ ಬದಲು 24ರಲ್ಲಿ ಕುರಿ ತಳಿ ಸಂವರ್ಧನಾ ಕೇಂದ್ರ ಸ್ಥಾಪಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಅದೇ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯನ್ನೂ ಸ.ನಂ.24ರ ಜಮೀನಿನಲ್ಲಿಯೇ ನಿರ್ಮಿಸಲು ಸಾಧ್ಯವಿದೆ. ಜಿಲ್ಲಾಡಳಿತ ರೈತರ ಸಮಸ್ಯೆಗೆ ಸ್ಪಂದಿಸಬೇಕಿದೆ.

ನೀಲಪ್ಪ ಕಡಿಯವರ್

ಕರ್ನಾಟಕ ರೈತ ಸೇನೆಯ ಜಿಲ್ಲಾಧ್ಯಕ್ಷ, ಕೊಪ್ಪಳ

--

ತಾಲೂಕಿನ ನಿಲೋಗಲ್ ಗ್ರಾಮಕ್ಕೆ ನಾರಿ ಸುವರ್ಣ ಕುರಿ ತಳಿ ಸಂವರ್ಧನಾ ಕೇಂದ್ರ ಮಂಜೂರಾಗಿದೆ. ಕೇಂದ್ರ ಸ್ಥಾಪನೆಗೆ ಅನುದಾನವೂ ಬಿಡುಗಡೆಯಾಗಿ ಕೆಆರ್‌ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ)ಗೆ ಕಾಮಗಾರಿ ಜವಾಬ್ದಾರಿ ವಹಿಸಲಾಗಿದೆ. ಕೇಂದ್ರ ಸ್ಥಾಪನೆಗೆ ಜಿಲ್ಲಾಧಿಕಾರಿ ಜಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಹಿಂದಿನಿಂದಲೂ ಸದರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತ ಬಂದಿದ್ದೇವೆಂದು ಹೇಳುತ್ತಿರುವ ಕೆಲ ರೈತರು, ಕೇಂದ್ರ ಸ್ಥಾಪನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಕಳೆದ ಮಾರ್ಚ್ ತಿಂಗಳಲ್ಲಿ ಗ್ರಾಮದಲ್ಲಿ ಶಾಂತಿಸಭೆ ನಡೆಸಿ ರೈತರಿಗೆ ತಿಳಿ ಹೇಳಲಾಗಿದೆ. ಈಗಲೂ ಸಮಸ್ಯೆ ಮುಂದುವರಿದಿದೆ. ಕೇಂದ್ರ ಸ್ಥಾಪನೆಯಾದರೆ ಜಿಲ್ಲೆ ಮಾತ್ರವಲ್ಲದೆ ಸುತ್ತಲಿನ ಬಾಗಲಕೋಟೆ, ಗದಗ ಇತರ ಜಿಲ್ಲೆಯ ರೈತರಿಗೂ ಅನುಕೂಲವಾಗಲಿದೆ.

ಆನಂದ ದೇವರನಾವದಗಿ

ಪ್ರಭಾರ ಸಹಾಯಕ ನಿರ್ದೇಶಕ, ಕುರಿ ಮತ್ತು ಉಣ್ಣೆ ನಿಗಮ, ಕುಷ್ಟಗಿ

---

ನಿಲೋಗಲ್ ಗ್ರಾಮಕ್ಕೆ ಮಂಜೂರಾಗಿರುವ ನಾರಿ ಸುವರ್ಣ ಕುರಿ ತಳಿ ಸಂವರ್ಧನಾ ಕೇಂದ್ರಕ್ಕೆ ಸಂಬಂಧಿಸಿದಂತೆ ಕುರಿಗಳಿಗೆ ಶೆಡ್ ಹಾಗೂ ಸಂಬಂಧಿಸಿದ ಕಚೇರಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಾಮಗಾರಿ ನಿರ್ಮಾಣಕ್ಕೆ ಈಗಾಗಲೇ 60ಲಕ್ಷ ರೂ. ಬಿಡುಗಡೆಯಾಗಿದೆ. ಅಲ್ಲಿನ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಇರ್ಫಾನ್

ಎಇಇ, ಕೆಆರ್‌ಐಡಿಎಲ್, ಉಪ ವಿಭಾಗ ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net