ಪೊಲೀಸರಿಗೆ ತಲೆನೋವಾದ ವಾರದ ಸಂತೆ!

Kustagi weekly Market
ಕುಷ್ಟಗಿಯ ಪುರಸಭೆ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಮಹಿಳಾ ವ್ಯಾಪಾರಿಗಳಿಬ್ಬರ ನಡುವೆ ಗಲಾಟೆ ನಡೆದು ಸ್ಥಳಕ್ಕೆ ಕ್ರೈಂ ಪಿಎಸ್‌ಐ ಮಾನಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಬುದ್ಧಿವಾದ ಹೇಳಿದರು.
Published on

ಕುಷ್ಟಗಿ: ಪಟ್ಟಣದ ಪುರಸಭೆ ರಸ್ತೆಯಲ್ಲಿ ವಾರದ ಸಂತೆ ದಿನವಾದ ಪ್ರತಿ ಭಾನುವಾರ ಒಂದಿಲ್ಲೊಂದು ಗಲಾಟೆ ನಡೆಯುತ್ತಿವೆ. ರಸ್ತೆಯ ಎರಡೂ ಬದಿ ಹಾಗೂ ಮಧ್ಯದಲ್ಲಿ ತರಕಾರಿಗಳನ್ನಿಟ್ಟು ಕೊಂಡು ವ್ಯಾಪಾರ ಮಾಡುತ್ತಿರುವುದು ಗಲಾಟೆಗೆ ಕಾರಣವಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಪುರಸಭೆ ರಸ್ತೆಯ ಪಕ್ಕದಲ್ಲಿರುವ ಜಾಗದಲ್ಲಿ ಸಂತೆಗೆ ಸ್ಥಳ ನಿಗದಿ ಮಾಡಲಾಗಿದೆ. ರಸ್ತೆಯ ಎಡಬದಿಯ ಕೋರ್ಟ್ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಫುಟ್‌ಪಾತ್ ಮೇಲೆ ಹಲವು ವ್ಯಾಪಾರಿಗಳು ತರಕಾರಿ ಅಂಗಡಿಗಳನ್ನಿಟ್ಟುಕೊಂಡು ನಿತ್ಯ ವ್ಯಾಪಾರ ಮಾಡುತ್ತಿದ್ದಾರೆ. ವಾರದ ಸಂತೆಯ ದಿನ ಸಾಲು ಸಾಲು ತಳ್ಳುವ ಬಂಡಿಗಳಲ್ಲಿ ವ್ಯಾಪಾರ ನಡೆಯುತ್ತದೆ. ಸಾಲದೆಂಬಂತೆ ರಸ್ತೆ ಮಧ್ಯೆ ಹಾಗೂ ಡಿವೈಡರ್‌ಗಳ ಮೇಲೆಯೂ ವ್ಯಾಪಾರಿಗಳು ಕಂಡುಬರುತ್ತಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ.

ಬಹುತೇಕ ವ್ಯಾಪಾರಿಗಳು ಸಾಂಪ್ರದಾಯಿಕ ತಕ್ಕಡಿ ಕಲ್ಲುಗಳನ್ನಿಟ್ಟು ವ್ಯಾಪಾರ ನಡೆಸುತ್ತಿದ್ದರಿಂದ ತೂಕದಲ್ಲಿ ವ್ಯತ್ಯಾಸವಾಗಿ ಗ್ರಾಹಕರು ವ್ಯಾಪಾರಿಗಳ ಜತೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ಬಂಡಿ ನಿಲ್ಲಿಸುವ ಸಂಬಂಧ ವ್ಯಾಪಾರಿಗಳು ಪರಸ್ಪರ ಕಾದಾಟಕ್ಕಿಳಿಯುವುದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಸಂತೆ ದಿನ ಒಂದಿಲ್ಲೊಂದು ಗಲಾಟೆ ನಡೆಯುತ್ತಿವೆ. ಸಾಂಪ್ರದಾಯಿಕ ತಕ್ಕಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುವವರಿಗೆ ತಾಕೀತು ಮಾಡುವವರು ಇಲ್ಲದಂತಾಗಿದೆ. ಗಲಾಟೆ ನಡೆದಾಗ ಮಾತ್ರ ಪೊಲೀಸರು ಬಂದು ಹೋಗುತ್ತಾರೆ.
ಇಡೀ ದಿನ ಪೊಲೀಸರು ಬಂದು ಹೋಗುತ್ತಿರುತ್ತಾರೆಂಬ ಭಯ ಇದ್ದರೆ ಗಲಾಟೆಗಳು ನಡೆಯುವುದಿಲ್ಲ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ರಸ್ತೆಯ ಅಕ್ಕ ಪಕ್ಕದ ವ್ಯಾಪಾರಿಗಳು ಹೇಳುತ್ತಿದ್ದಾರೆ.

ರಸ್ತೆ ಮಧ್ಯೆ ವ್ಯಾಪಾರ ನಡೆಸದಂತೆ ತಾಕೀತು ಮಾಡಲಾಗುತ್ತಿದೆ. ಈ ಸಂಬಂಧ ದಂಡ ಹಾಕಿ ಎಚ್ಚರಿಕೆ ನೀಡಲಾಗುತ್ತಿದೆ. ತಕ್ಕಡಿ ಕಲ್ಲುಗಳು ಅದಲಿ ಬದಲಿ ಆಗಿವೆ ಎಂಬ ಕಾರಣಕ್ಕೆ ಮಹಿಳೆಯರಿಬ್ಬರು ವಾಗ್ವಾದಕ್ಕಿಳಿದಿದ್ದರು. ಸ್ಥಳಕ್ಕೆ ತೆರಳಿ ಬುದ್ಧಿವಾದ ಹೇಳಲಾಗಿದೆ.| ಮಾನಪ್ಪ ಪಿಎಸ್‌ಐ ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net