

ಕುಷ್ಟಗಿ: ಪಟ್ಟಣದ ವಿವಿಧ ಒಳ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳನ್ನು ಕಟ್ಟಡಗಳು ಅತಿಕ್ರಮಿಸುತ್ತಿರುವುದರಿಂದ ವಿವಿಧ ವಾಹನಗಳ ಓಡಾಟ ದುಸ್ತರವಾಗಿದೆ. ನಿತ್ಯ ಓಡಾಡುವ ಸಾರ್ವಜನಿಕರು ಪುರಸಭೆ ನಿರ್ಲಕ್ಷೃಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದಲ್ಲಿ 23 ವಾರ್ಡ್‌ಗಳಿವೆ. ತಾಲೂಕು ಕೇಂದ್ರವಾಗಿ 50 ವರ್ಷ ಕಳೆದಿದೆ. ಆದರೆ ಜನರಿಗೆ ಮೂಲ ಸೌಕರ್ಯ ಸಿಗುತ್ತಿಲ್ಲ. ತಾವರಗೇರಾ, ಕೊಪ್ಪಳ, ಗಜೇಂದ್ರಗಡ, ಹನುಮಸಾಗರ, ಶಾಖಾಪುರ ರಸ್ತೆಗಳ ಅಕ್ಕ ಪಕ್ಕ ಲೇಔಟ್‌ಗಳು ತಲೆ ಎತ್ತಿ ಪಟ್ಟಣದ ವ್ಯಾಪ್ತಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಪಟ್ಟಣ ಬೆಳವಣಿಗೆಯಾಗುತ್ತಿದ್ದರೂ ರಸ್ತೆಗಳ ಚಿತ್ರಣ ಬದಲಾಗದಿರುವುದು ಜನರು ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ.
ಪಟ್ಟಣದ ಬಸ್ ನಿಲ್ದಾಣ ಹಿಂಬದಿಯ ಕಾಂಪೌಂಡ್‌ಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ದ್ರವ ತ್ಯಾಜ್ಯ ಮಡುಗಟ್ಟಿ ನಿಂತು ಬೈಕ್‌ಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಂದಕೂರ ಜ್ಯುವೆಲೆರ್ಸ್ ಪಕ್ಕದ ರಸ್ತೆಯ ಅಕ್ಕ ಪಕ್ಕ ತಲೆ ಎತ್ತಿರುವ ಕಟ್ಟಡಗಳು ರಸ್ತೆ ಅತಿಕ್ರಮಿಸಿರುವುದರಿದ 30 ಅಡಿ ಅಗಲದ ರಸ್ತೆ ಇಕ್ಕಟ್ಟಾಗಿದೆ. ನಿರ್ಮಾಣ ಹಂತದ ಕಟ್ಟಡದ ಕಲ್ಲು, ಮಣ್ಣ, ಇತರ ಘನತ್ಯಾಜ್ಯವನ್ನೆಲ್ಲ ರಸ್ತೆ ಮಧ್ಯೆಯೇ ಹಾಕಿರುವುದರಿಂದ ತಗ್ಗುಗಳ ಜತೆ ದಿನ್ನೆಗಳೂ ನಿರ್ಮಾಣವಾಗಿವೆ.
ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲವಾದರೂ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಶಾಖಾಪುರ ರಸ್ತೆಗೆ ಹೊಂದಿಕೊಂಡಿರುವ ಒಳ ರಸ್ತೆಯನ್ನು ಕಾಮಗಾರಿ ನೆಪದಲ್ಲಿ ಅಗೆದು ಕೈಬಿಡಲಾಗಿದೆ. ಇದರಿಂದ ಕಾಲುವೆ ಆಕಾರದ ತಗ್ಗುಗಳು ನಿರ್ಮಾಣವಾಗಿ ಚರಂಡಿ ತ್ಯಾಜ್ಯ ಸಂಗ್ರಹಗೊಂಡು ಸಂಚಾರಕ್ಕೆ ಅಡ್ಡಿಯಾಗಿದೆ. ಈಗಾಗಲೇ ಹಲವರು ಕಾಲು ಜಾರಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಚಿಕ್ಕ ಮಕ್ಕಳು ಬಿದ್ದು, ಅವಘಡ ಸಂಭವಿಸುವ ಮುನ್ನ ಪುರಸಭೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ನಿವಾಸಿಗಳು ಆಗ್ರಹಿಸಿದರು.