

ಕುಷ್ಟಗಿ: ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡವರ ವಿರುದ್ಧ ಅಗತ್ಯ ಕ್ರಮಕ್ಕೆ ಆಗ್ರಹಿಸಿ ಪಟ್ಟಣದ 6ನೇ ವಾರ್ಡ್ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟಿಗೆ ಗುರುವಾರ ಮನವಿ ಸಲ್ಲಿಸಿದರು.
ವಾರ್ಡ್‌ನ ವಿದ್ಯಾನಗರದ ಚಂದ್ರಶೇಖರ ಓತಗೇರಿ ಎನ್ನುವವರ ನಿವೇಶನದಿಂದ ಶಾಂತಯ್ಯ ಸರಗಣಾಚಾರರ ನಿವೇಶನ ಮಧ್ಯದಲ್ಲಿ 30ಅಡಿ ಅಗಲದ ಸಾರ್ವಜನಿಕ ರಸ್ತೆ ಇದ್ದು, ಗಜೇಂದ್ರಗಡ ಮುಖ್ಯ ರಸ್ತೆ ಸಂಪರ್ಕಿಸಲು ವಾರ್ಡ್‌ನ ನಿವಾಸಿಗಳು ಇದೇ ಮಾರ್ಗ ಅವಲಂಬಿಸಿದ್ದೇವೆ. ಸದ್ಯ ಈ ರಸ್ತೆಯಲ್ಲಿ ಶಿವಬಸಮ್ಮ ನಾಯಕವಾಡಿ, ಮಲ್ಲಿಕಾರ್ಜುನ ಬಳಿಗಾರ, ಮಹಾಂತೇಶ ದಾಸರ್ ಹಾಗೂ ಮಲ್ಲಪ್ಪ ಪಟ್ಟಣಶೇಟ್ಟರ್ ಎನ್ನುವವರು ಕಟ್ಟಡ ನಿರ್ಮಿಸಿಕೊಂಡಿದ್ದಾರೆ.
ಕಟ್ಟಡ ನಿರ್ಮಾಣ ಹಂತದಲ್ಲಿರುವಾಗಲೇ ಹಲವು ಬಾರಿ ಮನವಿ ಸಲ್ಲಿಸಿ ರಸ್ತೆ ಅತಿಕ್ರಮಣ ತಡೆಯುವಂತೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ರಸ್ತೆ ಸಂಪರ್ಕ ಇಲ್ಲದೆ ವಿವಿಧ ಮುಖ್ಯ ರಸ್ತೆಗಳಿಗೆ ತೆರಳಲು ತೊಂದರೆಯಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರಸ್ತೆ ಅತಿಕ್ರಮಿಸಿದವರ ವಿರುದ್ಧ ಅಗತ್ಯ ಕ್ರಮ ಕೈಗೊಂಡು ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕೆಂದು ವಾರ್ಡ್ ನಿವಾಸಿಗಳಾದ ಮಹೇಶ ಓತಗೇರಿ, ಪ್ರಶಾಂತ ಹಿರೇಮಠ, ಮನೋಜ ಕುಲಕರ್ಣಿ, ಸಂಗಮೇಶ ಹಿರೇಮಠ, ವಿನಯ್ ಹಿರೇಮಠ, ಸಂಪತ್ ಜೈನ್ ಇತರರು ಆಗ್ರಹಿಸಿದರು.