ಈವರೆಗೆ ನೀವು ಮಾಡಿದ್ದಾದರೂ ಏನು? ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪ್ರಶ್ನೆ

Nomadic Development Corporation
ಕುಷ್ಟಗಿಯ ಕೃಷ್ಣಗಿರಿ ಕಾಲನಿಯಲ್ಲಿ ಅಲೆಮಾರಿ ಸಮುದಾಯ ವಾಸಿಸುವ ಸ್ಥಳಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೋಮವಾರ ಸಂಜೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾ ಅವರನ್ನು ತರಾಟೆಗೆ ತಗೆದುಕೊಂಡರು.
Published on

ಕುಷ್ಟಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೋಮವಾರ ಸಂಜೆ ಪಟ್ಟಣದ ಕೃಷ್ಣಗಿರಿ ಕಾಲನಿಯ ಅಲೆಮಾರಿ ಸಮುದಾಯ ವಾಸಿಸುವ ಪ್ರದೇಶಕ್ಕೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದರು. ಸಮರ್ಪಕ ಮಾಹಿತಿ ನೀಡದೆ ತಡವರಿಸಿದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರರನ್ನು ಅಧ್ಯಕ್ಷೆ ತರಾಟೆಗೆ ತಗೆದುಕೊಂಡರು.

ಕಳೆದ 20ವರ್ಷಗಳಿಂದ ವಾಸಿಸುತ್ತಿದ್ದೇವೆ. ಈವರೆಗೆ ಸ್ವಂತ ನಿವೇಶನವಾಗಲಿ, ಸೂರಾಗಲಿ ಕಲ್ಪಿಸಿಲ್ಲ. ವಾಸಿಸುವ ಸ್ಥಳದಲ್ಲಿ ಮೂಲ ಸೌಕರ್ಯವನ್ನೂ ಕಲ್ಪಿಸಿಲ್ಲ. ಪುರಸಭೆಯ ಯಾವೊಬ್ಬ ಅಧಿಕಾರಿಗಳು ಇತ್ತ ಮುಖ ಮಾಡುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಅಲವತ್ತುಕೊಂಡರು. ನಿವೇಶನ, ಮನೆ ಇಲ್ಲದ ಅವಕಾಶ ವಂಚಿತರನ್ನು ಗುರುತಿಸಿ ಅವರಿಗೆ ಸೂರು ಕಲ್ಪಿಸುವಂತೆ ಸರ್ಕಾರದ ಆದೇಶವಿದೆ.

ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಸಮುದಾಯಕ್ಕೆ ಸೂರು ಕಲ್ಪಿಸುವ ಸಂಬಂಧ ಯಾವ ಕ್ರಮ ಕೈಗೊಂಡಿದ್ದೀರೆಂದು ಕೇಳಿದ ಅಧ್ಯಕ್ಷೆಗೆ ಕಚೇರಿಯಲ್ಲಿ ಕಡತ ನೋಡಿ ಹೇಳುವುದಾಗಿ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಉತ್ತರಿಸಿದರು. ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿ ಇದ್ದಾಗ್ಯೂ ಕೈಬೀಸಿಕೊಂಡು ಬಂದಿದ್ದೀರಿ. ಒಮ್ಮೆಯಾದರೂ ಅಲೆಮಾರಿ ಸಮುದಾಯದವರ ಸಮಸ್ಯೆ ಆಲಿಸಿದ್ದಾರಾ? ಈವರೆಗೆ ನೀವು ಮಾಡಿದ್ದಾದರೂ ಏನು? ಇಚ್ಛಾಶಕ್ತಿ ಇಲ್ಲವೇ? ಇದು ನಿಮ್ಮ ಜವಾಬ್ದಾರಿ ಅಲ್ಲವೇ ಎಂದೆಲ್ಲ ತರಾಟೆಗೆ ತಗೆದುಕೊಂಡರು.

ತಹಸೀಲ್ದಾರ್ ಅಶೋಕ ಶಿಗ್ಗಾವಿ ಪ್ರತಿಕ್ರಿಯಿಸಿ, ಅಲೆಮಾರಿಗಳಿಗೆ ಸೂರು ಕಲ್ಪಿಸಲು ಸರ್ಕಾರಿ ಜಮೀನು ಹುಡುಕಿ ನಿಗದಿ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಗ್ರಾಪಂ ಪಿಡಿಒಗಳು ಹಾಗೂ ಪಟ್ಟಣ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳು ಅವಕಾಶ ವಂಚಿತರ ಪಟ್ಟಿ ನೀಡಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ತಿಳಿಸಿದರು.

ಅಲೆಮಾರಿ ಸಮುದಾಯಗಳಿಗೆ ಸೌಕರ್ಯ ಕಲ್ಪಿಸುವಲ್ಲಿ ಜಿಲ್ಲೆಯಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಸಂಬಂಧ ನ.19ರಂದು ಜಿಲ್ಲಾಧಿಕಾರಿ ಜತೆ ಸಭೆ ನಡೆಸಲಾಗುತ್ತಿದೆ. ಅಗತ್ಯ ಮಾಹಿತಿಯೊಂದಿಗೆ ಹಾಜರಾಗಿ ಎಂದು ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅಧಿಕಾರಿಗಳಿಗೆ ಸೂಚಿಸಿದರು.

ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಆನಂದಕುಮಾರ್, ಅಲೆಮಾರಿ, ಕುಳುವ ಮಹಾಸಂಘಟನೆಯ ಅಧ್ಯಕ್ಷ ಶಿವಾನಂದ ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net