ಬಿಜೆಪಿ ಬೆಂಬಲಿಸಿದ ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಡಿಸಿ ಎಸ್.ವಿಕಾಸ್ ಕಿಶೋರ್ ಆದೇಶ

11052022 Kustagi Muncipal Member
Published on

ಕುಷ್ಟಗಿ: ಪಕ್ಷಾಂತರ ಮಾಡಿ ಬಿಜೆಪಿಯನ್ನು ಬೆಂಬಲಿಸಿದ್ದ ಪುರಸಭೆಯ ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಬುಧವಾರ ಆದೇಶ ಹೊರಡಿಸಿದ್ದಾರೆ.

ಒಟ್ಟು 23ಸದಸ್ಯ ಬಲ ಹೊಂದಿರುವ ಪುರಸಭೆಗೆ ಕಾಂಗ್ರೆಸ್ ಪಕ್ಷದಿಂದ 12, ಬಿಜೆಪಿಯಿಂದ 8 ಹಾಗೂ ಪಕ್ಷೇತರ ಮೂವರು ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತವಿದ್ದರೂ ಪಕ್ಷದಿಂದ ಚುನಾಯಿತಗೊಂಡ 17ನೇ ವಾರ್ಡ್‌ನ ವೀರೇಶಗೌಡ ಬೆದವಟ್ಟಿ ಹಾಗೂ 3ನೇ ವಾರ್ಡ್‌ನ ಗೀತಾ ತುರಕಾಣಿ ಎನ್ನುವವರು ಪಕ್ಷಾಂತರ ಮಾಡಿ ಬಿಜೆಪಿಯನ್ನು ಬೆಂಬಲಿಸಿದ್ದರು.

ಪಕ್ಷೇತರ ಮೂವರು ಹಾಗೂ ಪಕ್ಷಾಂತರ ಮಾಡಿ ಬಂದ ಇಬ್ಬರನ್ನು ಸೇರಿಸಿಕೊಂಡು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ಪಕ್ಷ ಜಾರಿ ಮಾಡಿದ ವಿಪ್ ವಿಲ್ಲಂಘಿಸಿ ಪಕ್ಷಾಂತರ ಮಾಡಿದ ಇಬ್ಬರು ಸದಸ್ಯರ ಸದಸ್ಯತ್ವ ರದ್ದುಗೊಳಿಸುವಂತೆ ಸದಸ್ಯ ರಾಮಣ್ಣ ಬಿನ್ನಾಳ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್, ಅರ್ಜಿ ಪುರಸ್ಕರಿಸಿ ಪಕ್ಷಾಂತರ ನಿಷೇಧ ಕಾಯಿದೆಯಡಿ ಇಬ್ಬರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net