

ಕುಷ್ಟಗಿ: ದುಸ್ಥಿತಿಯಲ್ಲಿರುವ ಹಾಗೂ ಹಳೆಯ ಭೂ ದಾಖಲೆಗಳನ್ನು ಡಿಜಿ ದಾಖಲೆಗಳಾಗಿ ಪರಿವರ್ತಿಸಲಾಗುತ್ತಿದೆ. ದಾಖಲೆಗಳ ಡಿಜಿಟಲೀಕರಣ ನಂತರ ಸಾರ್ವಜನಿಕರಿಗೆ ದಾಖಲೆ ಪಡೆಯುವುದು ಸುಲಭವಾಗಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆ ಮೂಲಕ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಸಾರ್ವಜನಿಕರ ಭೂ ದಾಖಲೆಗಳನ್ನು ಸುಲಭ ರೀತಿಯಲ್ಲಿ ತಲುಪಿಸುವ ಸಲುವಾಗಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರಿಂದ ದಾಖಲೆಗಳ ಸಂರಕ್ಷಣೆ ಜತೆಗೆ ತಿದ್ದುಪಡಿಗೆ ಅವಕಾಶ ಇಲ್ಲದಂತಾಗುತ್ತದೆ. ಡಿಜಿಟಲ್ ಮಾಧ್ಯಮದಿಂದ ನೇರ ದಾಖಲೆ ಪಡೆಯುವ ಮೂಲಕ ಸಾರ್ವಜನಿಕರು ಡಿಜಿಟಲೀಕರಣದ ಸದುಪಯೋಗ ಪಡೆಯಬೇಕಿದೆ ಎಂದರು.
ತಹಸೀಲ್ದಾರ್ ಅಶೋಕ ಶಿಗ್ಗಾವಿ ಮಾತನಾಡಿ, ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಎಲ್ಲ ತಯಾರಿ ಪೂರ್ಣಗೊಂಡು ಯೋಜನೆಗೆ ಅಧಿಕೃತ ಚಾಲನೆ ನೀಡಲಾಗಿದೆ. ತಾಲೂಕಿನ ಎಲ್ಲ ಗ್ರಾಮಗಳಿಗೆ ಸಂಬಂಧಿಸಿದ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯ 6ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದರು. ಕಂದಾಯ ಇಲಾಖೆ ಅಧಿಕಾರಿಗಳಾದ ಶರಣಯ್ಯ ನಿಡಗುಂದಿಮಠ, ಸುಂದರರಾಜ್, ಶರಣಪ್ಪ ಹುಡೇದ್ ಇತರರಿದ್ದರು.