

ಕುಷ್ಟಗಿ: ಸಾಹಿತ್ಯ ಸಮ್ಮೇಳನ ಎಂದರೆ ನಾಡದೇವಿಯ ಉತ್ಸವವಾಗಿದ್ದು, ಇದರಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಶಾಸಕ ದೊಡ್ಡನಗೌಡ ಪಾಟೀಲ್ ಮನವಿ ಮಾಡಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು. ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಫೆ.15ರಂದು ನಡೆಯಲಿರುವ ಸಮ್ಮೇಳನಕ್ಕೆ ಸಂಬಂಧಿಸಿದ ತಯಾರಿ ಭರದಿಂದ ಸಾಗಿದೆ. ಸರ್ವಾಧ್ಯಕ್ಷರ ಆಯ್ಕೆ, ಔಪಚಾರಿಕ ಆಮಂತ್ರಣ ನಂತರ ಲಾಂಛನ ಬಿಡುಗಡೆಯನ್ನೂ ಮಾಡಲಾಗಿದೆ. ಹೂಲಗೇರಾ ಗ್ರಾಮಸ್ಥರು ಮಾತ್ರವಲ್ಲದೆ ತಾಲೂಕಿನ ಕನ್ನಡ ಮನಸ್ಸುಗಳೆಲ್ಲ ಒಗ್ಗೂಡಿ ಕೆಲಸ ಮಾಡಬೇಕಿದೆ. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿ ಸಮ್ಮೇಳನ ನಡೆಯಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ತಾಲೂಕು ಮಟ್ಟದ ಅತಿ ಹೆಚ್ಚು ಸಮ್ಮೇಳನಗಳು ಇಲ್ಲಿ ಜರುಗಿವೆ. ಫೆ.15ರಂದು ನಡೆಯಲಿರುವ 13ನೇ ಸಮ್ಮೇಳನ ಮಾದರಿಯಾಗಬೇಕಿದೆ. ಸ್ಮರಣ ಸಂಚಿಕೆ ಸೇರಿದಂತೆ ಸಮ್ಮೇಳನದ ವಿವಿಧ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸಲು ಅಗತ್ಯ ತಯಾರಿಯಾಗಬೇಕಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ಸಮ್ಮೇಳನದ ಲಾಂಛನದಲ್ಲಿ ಹೂಲಗೇರಾ ಗ್ರಾಮದ ಗುಂಡಮಲ್ಲೇಶ್ವರ, ಸೋಮೇಶ್ವರ ದೇವಸ್ಥಾನ, ದಾದೇಪೀರ ದರ್ಗಾ, ಕಬ್ಬರಗಿಯ ಜಲಪಾತ ಹಾಗೂ ಸುತ್ತಲಿನ ಐತಿಹಾಸಿಕ ಸ್ಮಾರಕಗಳ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ ಮಾಡಲಾಗಿದೆ ಎಂದರು.
ಕೇಂದ್ರ ಸಂಘ ಸಂಸ್ಥೆ ಪ್ರತಿನಿಧಿ ನಬಿಸಾಬ ಕುಷ್ಟಗಿ, ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬಾಕಳೆ ಮಾತನಾಡಿದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್‌ಸಾಬ ಮೂಲಿಮನಿ, ಕಸಾಪ ತಾಲೂಕು ಮಾಜಿ ಅಧ್ಯಕ್ಷರಾದ ಹನುಮೇಶ ಗುಮಗೇರಿ, ಶ್ರೀನಿವಾಸ ಜಹಗೀರದಾರ್, ನಟರಾಜ ಸೋನಾರ, ಚಂದಪ್ಪ ಹಕ್ಕಿ, ಶರಣಪ್ಪ ವಡಗೇರಿ, ಹೂಲಗೇರಾ ಗ್ರಾಮದ ಪ್ರಕಾಶ ರಾಠೋಡ, ಸುರೇಶ ಕುಂಟನಗೌಡ್ರ, ಮುತ್ತಣ್ಣ ಕರಡಿ, ಶೇಖರ್ ಹೊರಪ್ಯಾಟಿ, ಹೂಲಗೇರಾ ಗ್ರಾಪಂ ಪಿಡಿಒ ಆನಂದ ಎಲಿಗಾರ, ಪ್ರಮುಖರಾದ ಅಬ್ದುಲ್ ರಜಾಕ್ ಟೇಲರ್, ಶೈಲಜಾ ಬಾಗಲಿ, ಲಲಿತಮ್ಮ ಹಿರೇಮಠ, ಮಯೂರಿ ಇತರರಿದ್ದರು.
ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಕಾರ್ಯಕ್ರಮ ಆರಂಭ ಗೊಂಡಿದ್ದರಿಂದ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕಸಾಪ ಆಜೀವ ಸದಸ್ಯರು ಹಾಗೂ ಸಾಹಿತ್ಯಾಸಕ್ತರು ಬೇಸರ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ವೀರೇಶ ಬಂಗಾರಶೆಟ್ಟರ್ ರಾಜೀನಾಮೆ ಸಲ್ಲಿಸಿದ ನಂತರ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ನೂತನ ಅಧ್ಯಕ್ಷರ ಪದಗ್ರಹಣ ವೇಳೆ ಅಧಿಕಾರ ಹಸ್ತಾಂತರಿಸಲೂ ಬಂದಿರಲಿಲ್ಲ. ನಂತರ ನಡೆದ ಪದಾಧಿಕಾರಿಗಳ ಪದಗ್ರಹಣ, ಸಮ್ಮೇಳನ ಆಯೋಜನೆ ಪೂರ್ವಭಾವಿ ಸಭೆ, ಸರ್ವಾಧ್ಯಕ್ಷರ ಆಯ್ಕೆ ಸಭೆ, ಸರ್ವಾಧ್ಯಕ್ಷರಿಗೆ ಔಪಚಾರಿಕ ಆಮಂತ್ರಣ ನೀಡಲು ಏರ್ಪಡಿಸಿದ್ದ ಕಾರ್ಯಕ್ರಮಕ್ಕೂ ಆಗಮಿಸಿರಲಿಲ್ಲ. ಈಗ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲೂ ವೀರೇಶ ಹೊರತು ಮಾಜಿ ಅಧ್ಯಕ್ಷರೆಲ್ಲರೂ ಆಗಮಿಸಿದ್ದರು.