ಕುಟುಂಬದ ಏಳಿಗೆಗೆ ಮಹಿಳೆಯರೇ ಕಾರಣ; ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅಭಿಪ್ರಾಯ

03102021 Kustagi gandhiji jayanti
Published on


ಕುಷ್ಟಗಿ : ಕುಟುಂಬದ ಏಳಿಗೆ ಮನೆಯ ಮಹಿಳೆಯರ ಮೇಲೆ ಅವಲಂಬಿತವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಗಾಂಧಿ ಜಯಂತಿ ನಿಮಿತ್ತ ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನ ಸಭಾಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತಿ ಹಾಗೂ ಮಕ್ಕಳು ದುಶ್ಚಟಕ್ಕೆ ದಾಸರಾಗದಂತೆ ಮನೆಯೊಡತಿ ನೋಡಿಕೊಳ್ಳಬೇಕು. ಮದ್ಯಪಾನ, ಜೂಜಾಟದಂತಹ ದುಶ್ಚಟಗಳಿಗೆ ಬಲಿಯಾಗಿ ಕುಟುಂಬಗಳು ಬೀದಿಗೆ ಬಂದ ಸಾಕಷ್ಟು ಉದಾಹರಣೆಗಳು ಇವೆ. ಎಂತಹ ಸಂಕಷ್ಟ ಪರಿಸ್ಥಿತಿ ಎದುರಾದರೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಜೀವನ ನಡೆಸಬೇಕು ಎಂದರು.

ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಯುವಕರು ಸಿಗರೇಟ್ ಹಾಗೂ ಮದ್ಯ ಸೇವನೆಯ ದಾಸರಾಗುತ್ತಿದ್ದಾರೆ. ಪಾಲಕರು ಮಕ್ಕಳ ಚಲನ ವಲನ ಗಮನಿಸಿ ಸರಿದಾರಿಗೆ ತರುವ ಕಾರ್ಯ ಮಾಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net