

ಕುಷ್ಟಗಿ: ಶಾಲೆಯಲ್ಲಿ ದಾಖಲಾದ ಮಗು ಅದೇ ಶಾಲೆಯಲ್ಲಿ ವ್ಯಾಸಂಗ ಮಾಡಬೇಕು. ಶಾಲೆಗೆ ಅನಧಿಕೃತ ಗೈರಾಗಿ ಕೋಚಿಂಗ್ ಸೆಂಟರ್‌ಗಳಿಗೆ ಹಾಜರಾದಲ್ಲಿ ಅಂತಹ ಶಾಲೆಯ ಮುಖ್ಯ ಶಿಕ್ಷಕರನ್ನು ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಬಿಐಇ ಬಿ.ಉಮಾದೇವಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕಿನ ವಿವಿಧ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಗುಣಾತ್ಮಕ ಕಲಿಕೆಯನ್ನು ಪ್ರಾಥಮಿಕ ಹಂತದಿಂದಲೇ ಗಟ್ಟಿಗೊಳಿಸಬೇಕು. ಇದಕ್ಕಾಗಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಮಕ್ಕಳಿಗೆ ಬುನಾದಿ ಕಲಿಕೆಯನ್ನು ಸಾರ್ಥಗೊಳಿಸುವುದು ಮುಖ್ಯ ಶಿಕ್ಷಕರು ಹಾಗೂ ಎಲ್ಲ ಶಿಕ್ಷಕರ ಆದ್ಯ ಕರ್ತವ್ಯವಾಗಿರಬೇಕೆಂದು ತಿಳಿಸಿದರು.
ನಾವಿನ್ಯತೆಯ ಪುನರುಜ್ಜೀವನಕ್ಕೆ ಕಾರಣವಾಗಲಿರುವ ಮತ್ತು ಯುವ ನವೋದ್ಯಮಿಗಳನ್ನು ಆತ್ಮನಿರ್ಭರ ಭಾರತದ ಚಾಲಕರಾಗಿ ಸಶಕ್ತಗೊಳಿಸಲು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ವಿಕಸಿತ ಭಾರತ ಬಿಲ್ಡಥಾನ್-2025 ಅಭಿಯಾನಕ್ಕೆ ಎಲ್ಲ ಶಾಲೆಗಳು ನೋಂದಾಯಿಸುವಂತೆ ಸೂಚಿಸಿದರು.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಕೊಠಡಿಗಳನ್ನು ತರಗತಿ ನಿರ್ವಹಣೆಗೆ ಬಳಸದಂತೆ ಕರೆ ನೀಡಿದರು. ತರಗತಿಗೆ ಕೊಠಡಿಗಳ ಕೊರತೆ ಕಂಡುಬಂದಲ್ಲಿ ಸಮುದಾಯ ಭವನದಂತಹ ಕಟ್ಟಡಗಳ ಬಳಕೆ ಅಥವಾ ತರಗತಿಗಳ ಸರದಿ ಅನುಸರಿಸಲು ತಿಳಿಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ್, ಇಸಿಒ ರಾಘಪ್ಪ ಶ್ರೀರಾಮ್, ಬಿಆರ್‌ಪಿ ಶರಣಪ್ಪ ತೆಮ್ಮಿನಾಳ ಇತರರು ಇದ್ದರು.