ಮಾದಾಪುರ ಸಂಗಮ್ಮನ ಕೆರೆಗೆ ಬರುತ್ತಿದೆ ಜೀವಕಳೆ: ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ

22072022 Kustagi sangamma lake
Published on


ಕುಷ್ಟಗಿ: ತಾಲೂಕಿನ ಮುದೇನೂರು ಗ್ರಾಪಂ ವ್ಯಾಪ್ತಿ ಮಾದಾಪುರ ಗ್ರಾಮದ ಸಂಗಮ್ಮನ ಕೆರೆಗೆ ಜೀವಕಳೆ ಬರುತ್ತಿದೆ. ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಚ್ಚುವ ಹಂತ ತಲುಪಿದ್ದ ಕೆರೆಯನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ.

ಗ್ರಾಮದ ಜನವಸತಿ ಪ್ರದೇಶದಿಂದ ತೀರಾ ಹತ್ತಿರದಲ್ಲಿರುವ ಕೆರೆ ಜೆ.ರಾಂಪುರ ಮುಖ್ಯರಸ್ತೆಗೆ ಹೊಂದಿಕೊಂಡಿದೆ. ಕೆರೆ ಪಕ್ಕದಲ್ಲಿಯೇ ಹಳ್ಳ ಹರಿಯುತ್ತಿದ್ದು, ನೀರು ಸಂಗ್ರಹಕ್ಕೆ ಅನುಕೂಲಕರವಾಗಿದೆ. ಒಂದು ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯನ್ನು ಅಮೃತ ಸರೋವರ ಯೋಜನೆಯಂತೆ ಅಭಿವೃದ್ಧಿಪಡಿಸಿದರೆ ಕಣ್ಮನ ಸೆಳೆಯಲಿದೆ. ಜನ-ಜಾನುವಾರುಗಳ ಕುಡಿವ ನೀರಿನ ಸಮಸ್ಯೆ ನೀಗಲಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಅಮೃತ ಸರೋವರ ಯೋಜನೆಯ ಮೊದಲ ಹಂತಕ್ಕೆ ಆಯ್ಕೆಯಾಗಿದ್ದು, ಆ.15ರಂದು ಕೆರೆ ಪ್ರದೇಶದಲ್ಲಿ ಧ್ವಜಾರೋಹಣ ನೆರವೇರಿಸುವ ಕಾರಣ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಭಾಗಶಃ ಹೂಳು ತೆಗೆಯಲಾಗಿದೆ. ಸುತ್ತಲೂ ಕಲ್ಲುಗಳಿಂದ ಪಿಚ್ಚಿಂಗ್ ಮಾಡಲಾಗುತ್ತಿದೆ. ಗ್ರಾಮದ ಏಕೈಕ ಕೆರೆಯಾಗಿದ್ದು, ಅಮೃತ ಸರೋವರ ಯೋಜನೆಗೆ ಆಯ್ಕೆ ಮಾಡಿರುವುದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.

ನೀರು ಬಸಿಯುತ್ತಲೇ ಇದೆ: ಪಕ್ಕದಲ್ಲೇ ಹಳ್ಳ ಹರಿಯುತ್ತಿರುವುದರಿಂದ ಕೆರೆಯಲ್ಲಿ ನೀರು ಬಸಿಯುತ್ತಲೇ ಇದೆ. ಕಾಮಗಾರಿ ವೇಳೆ ಮೋಟರ್ ಸಹಾಯದಿಂದ ನಿತ್ಯ ನೀರನ್ನು ಹೊರತೆಗೆಯಲಾಗುತ್ತಿದೆ. ನಿರಂತರ ನೀರು ಬಸಿಯುವುದರಿಂದ ಕೆರೆಯಲ್ಲಿ ಸಂಗ್ರಹಿಸಿದರೆ ಜಾನುವಾರುಗಳ ಜತೆ ಜನರ ದಾಹ ತಣಿಸಲಿದೆ. ಹಳ್ಳದ ಅಕ್ಕ ಪಕ್ಕ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ನೀರು ಕೆರೆ ಪ್ರವೇಶಿಸುವಂತೆ ಮಾಡಿದರೆ ವರ್ಷವಿಡೀ ನೀರು ಇರಲಿದೆ. ಕೆರೆ ಸುತ್ತಲಿನ ಪ್ರದೇಶವನ್ನೂ ಸುಂದರವಾಗಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net