

ಕುಷ್ಟಗಿ: ಬೆಲೆ ಬಾಳುವ ಜಮೀನುಗಳನ್ನು ಚಿಲ್ಲರೆ ಕಾಸಿಗೆ ಮಾರಿಕೊಳ್ಳಬೇಡಿ ಎಂದು ಕೃಷ್ಣಾ-ಬಿ ಸ್ಕೀಂ ಹೋರಾಟ ಸಮಿತಿ ಕಾರ್ಯದರ್ಶಿ ಗಂಗಾಧರ ಕುಷ್ಟಗಿ ರೈತರಲ್ಲಿ ಮನವಿ ಮಾಡಿದರು.
ಪಟ್ಟಣದ ಹಳೇ ಐಬಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಣ ಬೇಸಾಯ ಆಧಾರಿತ ಕೃಷಿ ಅನುಸರಿಸುತ್ತಿರುವ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕನಕಗಿರಿ ಹಾಗೂ ಕೊಪ್ಪಳ ತಾಲೂಕಿನಲ್ಲಿ ಪವನ ವಿದ್ಯುತ್ ಶಕ್ತಿ ಉತ್ಪಾದಿಸುವ ಕಂಪನಿಗಳು ರೈತರಿಗೆ ಆಮಿಷವೊಡ್ಡಿ ಜಮೀನು ಖರೀದಿಸುತ್ತಿವೆ.
ಇದರಿಂದ ಜಮೀನು ಫಲವತ್ತತೆ ಕಳೆದುಕೊಂಡು ಬಂಜರು ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿವೆ. ಕುಷ್ಟಗಿ ತಾಲೂಕು ಒಂದರಲ್ಲಿಯೇ 20 ಸಾವಿರ ಎಕರೆ ಜಮೀನಿನಲ್ಲಿ ಪವನ ವಿದ್ಯುತ್ ಶಕ್ತಿಯ ಫ್ಯಾನ್‌ಗಳನ್ನು ಅಳವಡಿಸಲಾಗಿದೆ.
ಜಿಲ್ಲೆಯ 70-80 ಸಾವಿರ ಎಕರೆಯಲ್ಲಿ ಅಳವಡಿಸಲಾಗಿದೆ. ಪವನ ವಿದ್ಯುತ್ ಶಕ್ತಿ ಉತ್ಪಾದಿಸುವ ಕಂಪನಿಗಳ ಮೇಲೆ ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು ಸೇರಿದಂತೆ ಸೆಲೆಬ್ರೆಟಿಗಳು ಹಣ ಹೂಡಿಕೆ ಮಾಡುತ್ತಿದ್ದಾರೆ.
ವಿದ್ಯುತ್ ಉತ್ಪಾದನೆ ಹೆಸರಿನಲ್ಲಿ ಬಹುದೊಡ್ಡ ಲಾಭಿ ನಡೆಯುತ್ತಿದೆ. ರೈತರು ಜಮೀನು ಕಳೆದುಕೊಳ್ಳುತ್ತಿದ್ದರೂ ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಒಣ ಬೇಸಾಯ ಆಧಾರಿತ ಪ್ರದೇಶದಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಂಡಲ್ಲಿ ಈ ಭಾಗದ ಜಮೀನುಗಳಿಗೆ ಬೇಡಿಕೆ ಹೆಚ್ಚುತ್ತದೆ. ಕ್ಷಣಿಕ ಲಾಭಕ್ಕೆ ಜಮೀನು ಕಳೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.