

ಕುಷ್ಟಗಿ: ಕೋಲ್ಕತ್ತಾ ತರಬೇತಿ ವೈದ್ಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ವಿವಿಧ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಲ್ಲಯ್ಯ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮಾರುತಿ, ಬಸವೇಶ್ವರ ವೃತ್ತ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ತಹಸೀಲ್ದಾರ್ ಅಶೋಕ ಶಿಗ್ಗಾವಿಗೆ ಮನವಿ ಸಲ್ಲಿಸಲಾಯಿತು. ಅಪ್ರಾಪ್ತೆ, ಯುವತಿ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿವೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದಿರುವುದು ಪ್ರಕರಣಗಳು ಮರುಕಳಿಸುವಂತೆ ಮಾಡುತ್ತಿದೆ. ಪಶ್ಚಿಮ ಬಂಗಾಳ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡದೆ ಪರೋಕ್ಷವಾಗಿ ಆರೋಪಿಗಳ ಬೆನ್ನಿಗೆ ನಿಂತಂತೆ ವರ್ತಿಸುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪರಿಷತ್‌ನ ಜಿಲ್ಲಾ ಸಂಚಾಲಕ ಶಶಾಂಕ ಪಾಟೀಲ್, ಪದಾಧಿಕಾರಿಗಳಾದ ವಿನೋದ ಸಿಂಗ್, ಹನುಮೇಶ, ಕೇದಾರ, ಮೋಹನ್, ಶರಣು, ದೊಡ್ಡಬಸವ, ಅರವಿಂದ, ರಾಚೋಟಯ್ಯ, ಶಿವಕುಮಾರ್, ಮುದುಕಯ್ಯ ಸೇರಿದಂತೆ ಪಟ್ಟಣದ ಬಿ.ಜಿ.ಪ್ಯಾರಾ ಮೆಡಿಕಲ್, ಅನ್ನದಾನೇಶ್ವರ ಪಿಯು ಕಾಲೇಜು, ವಿಜಯ ಚಂದ್ರಶೇಖರ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.