ಕೃಷಿಯಲ್ಲಿನ ಖುಷಿ ಬೇರೆಲ್ಲೂ ಸಿಗುವುದಿಲ್ಲ

Untitled design (1)
ಕುಷ್ಟಗಿಯ ದಿ.ಎಸ್.ಕೆ.ಪಾಟೀಲರ ನಿವಾಸದಲ್ಲಿ ಭಾನುವಾರ ಏರ್ಪಡಿಸಿದ್ದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಹಾಗೂ ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ.ಗುರುರಾಜ ಸುಂಕದ್, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಾಧ್ಯಾಪಕ ಡಾ.ಎಂ.ವಿ.ರವಿ, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಇತರರು ಇದ್ದರು.
Published on

ಕುಷ್ಟಗಿ: ನಾಡಿನ ಸಂಸ್ಕೃತಿಯ ಜತೆಗೆ ಕೃಷಿಯ ಅವಿನಾಭಾವ ಸಂಬಂಧವಿದೆ ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ.ಗುರುರಾಜ ಸುಂಕದ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕಸಾಪ ತಾಲೂಕು ಘಟಕ, ರಾಯಚೂರು ಕೃಷಿ ವಿವಿ, ಮಂಗಳೂರಿನ ಮಲ್ಲಪ್ಪ ಸುಂಕದ ಕೃಷಿ ಮತ್ತು ಪರಿಸರ ಪ್ರತಿಷ್ಠಾನ, ಪಟ್ಟಣದ ಕುವೆಂಪು ರೈತ ಉತ್ಪಾದಕರ ಸಂಸ್ಥೆ, ಬಿಜಕಲ್‌ನ ಕರುನಾಡು ರೈತ ಉತ್ಪಾದಕರ ಸಂಸ್ಥೆ ಹಾಗೂ ಶಾಖಾಪುರದ ಮಾರುತೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಕಂದಕೂರಿನ ಇಂಜಿನಿಯರ್ ದಿ.ಎಸ್.ಕೆ.ಪಾಟೀಲರ ಸ್ಮರಣಾರ್ಥ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಹಾಗೂ ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿಯಲ್ಲಿನ ಖುಷಿ ಹಾಗೂ ಆನಂದ ಬೇರಾವ ಕ್ಷೇತ್ರದಲ್ಲಿಯೂ ಸಿಗುವುದಿಲ್ಲ. ಕೋವಿಡ್‌ನಂತಹ ಪರಿಸ್ಥಿತಿಯಲ್ಲಿ ಕೈಗಾರಿಕೆ, ಇನ್ನಿತರ ಕ್ಷೇತ್ರಗಳ ಕಾರ್ಯಗಳು ಸ್ಥಗಿತಗೊಂಡು ಕೃಷಿ ಚಟುವಟಿಕೆ ಮಾತ್ರ ನಿರಂತರ ನಡೆಯಿತು. ಅಮೆರಿಕದಲ್ಲಿ ಶೇ.5 ಕೃಷಿಕರಿದ್ದರೂ ತಾವು ಬೆಳೆಯುವ ಕೃಷಿ ಉತ್ಪನ್ನಗಳನ್ನು ಹಲವು ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಕೃಷಿ ವಿಜ್ಞಾನಿಗಳ ಸಲಹೆ ಪಡೆದು ವೈಜ್ಞಾನಿಕ ಬೇಸಾಯ ಮಾಡುತ್ತಿರುವುದರಿಂದಲೇ ಅಮೆರಿಕದ ರೈತರು ಉತ್ತಮ ಆದಾಯ ಕಂಡುಕೊಳ್ಳುತ್ತಿದ್ದಾರೆ. ಇಲ್ಲಿಯೂ ರೈತರು ವೈಜ್ಞಾನಿಕ ಪದ್ಧತಿ ಅನುಸರಿಸಿ ಕೃಷಿಯನ್ನು ಉದ್ಯಮವನ್ನಾಗಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದರು.

ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಾಧ್ಯಾಪಕ ಡಾ.ಎಂ.ವಿ.ರವಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲಿಯೂ ಕುಷ್ಟಗಿ ತಾಲೂಕು ಹಣ್ಣುಗಳ ಕಣಜ ಎಂದೇ ಹೆಸರು ಪಡೆದಿದೆ. ಇಲ್ಲಿರುವ ಫಲವತ್ತಾದ ಮಣ್ಣು ಹಾಗೂ ವಾತಾವರಣ ಕೃಷಿಗೆ ಪೂರಕವಾಗಿದೆ. ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಕೃಷಿ ಕೈಗೊಳ್ಳಬೇಕಿದೆ. ಗಂಗಾವತಿಯಲ್ಲಿ ಬೆಳೆಯುವ ಭತ್ತಕ್ಕೆ ಅತಿ ಹೆಚ್ಚು ರಾಸಾಯನಿಕ ಬಳಸುತ್ತಿರುವುದರಿಂದ ಅಲ್ಲಿನ ಅಕ್ಕಿಯಿಂದ ಬಹುತೇಕರು ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಗಂಗಾವತಿ ಹಾಗೂ ಸಿರಗುಪ್ಪದ ತಲಾ ಒಂದು ಗ್ರಾಮಗಳನ್ನು ಕ್ಯಾನ್ಸರ್ ಪೀಡಿತರ ಗ್ರಾಮಗಳನ್ನಾಗಿ ಗುರುತಿಸಲಾಗಿದೆ. ಮಣ್ಣಿನ ಸಾಮರ್ಥ್ಯಕ್ಕೆ ತಕ್ಕಂತೆ ರಾಸಾಯನಿಕ ಗೊಬ್ಬರ ಬಳಸಬೇಕಿದೆ ಎಂದರು.

ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ರಾಯಚೂರಿನ ಕೃಷಿ ವಿವಿಯ ವ್ಯವಸ್ಥಾಪಕ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ, ಕಸಾಪ ಕೇಂದ್ರ ಪ್ರತಿನಿಧಿ ನಬಿಸಾಬ ಕುಷ್ಟಗಿ, ನಿವೃತ್ತ ಪ್ರಾಚಾರ್ಯ ಎಸ್.ಬಿ.ಶಿವನಗುತ್ತಿ ಮಾತನಾಡಿದರು. ಪ್ರಮುಖರಾದ ಸುಕಮುನಿ ಬಂಡಿ, ಪರಶುರಾಮ ಪಲ್ಲೇದ, ಶ್ರೀನಿವಾಸ ಗುತ್ತೇದಾರ್, ಮನೋಜ ಸುಂಕದ್. ವಾಮನಮೂರ್ತಿ ಪುರೋಹಿತ, ಚಂದಪ್ಪ ಹಕ್ಕಿ, ಲೆಂಕೆಪ್ಪ ವಾಲಿಕಾರ, ಸೋಮನಗೌಡ ಪಾಟೀಲ್, ದೊಡ್ಡಯ್ಯ ಗದ್ದಡಕಿ, ಅಂದಪ್ಪ ಹಾಳಕೇರಿ, ವಿನಾಯಕ ಪಾಟೀಲ್, ನಜೀರಸಾಬ ಮೂಲಿಮನಿ, ಮಹೇಶ ಹಡಪದ್ ಇತರರಿದ್ದರು. ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net