ಅತಿಕ್ರಮ ತೆರವುಗೊಳಿಸಿದ ಕಾಮಗಾರಿಗೆ ಚಾಲನೆ

Untitled design (16)
Published on

ಕುಷ್ಟಗಿ: ಪಟ್ಟಣದ ಕಂದಕೂರು ಜುವೆಲ್ಲರಿ ಅಂಗಡಿ ಪಕ್ಕದ ರಸ್ತೆಯ ಸಿಸಿ ಕಾಮಗಾರಿಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ರಸ್ತೆ ಅಕ್ಕ-ಪಕ್ಕದ ಅತಿಕ್ರಮ ತೆರವುಗೊಳಿಸದೆ ಕಾಮಗಾರಿ ಆರಂಭಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿಯ 3 ಕೋಟಿ ರೂ.ವೆಚ್ಚದಲ್ಲಿ ಪಟ್ಟಣದ 1-7ನೇ ವಾರ್ಡ್‌ನ ವಿವಿಧ ರಸ್ತೆಗಳ ಸಿಸಿ ಹಾಗೂ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಗೆ ಮಾ. 16ರಂದು ಶಾಸಕ ದೊಡ್ಡನಗೌಡ ಪಾಟೀಲ್ ಚಾಲನೆ ನೀಡಿದ್ದರು. ಇದೇ ರಸ್ತೆಯಲ್ಲಿ ಭೂಮಿ ಪೂಜೆ ನೆರವೇರಿಸಿ ಇದೀಗ ಬರೋಬ್ಬರಿ 3 ತಿಂಗಳು ಕಳೆದಿದೆ. ಉಳಿದ ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದರೂ ಈ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ರಸ್ತೆಯ ಅಕ್ಕ-ಪಕ್ಕ 4 ಅಂತಸ್ತಿನ ವರೆಗಿನ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿದ್ದು, ಬಹುತೇಕ ಕಟ್ಟಡಗಳು ರಸ್ತೆಗೆ ಅತಿಕ್ರಮಿಸಿ ರಸ್ತೆ ಇಕ್ಕಟ್ಟಾಗಿದೆ. ಅತಿಕ್ರಮ ತೆರವಿನ ನಂತರವಷ್ಟೇ ಕಾಮಗಾರಿ ಆರಂಭಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರಿಂದ ನೆಲ ಅಗೆದು ಕೈ ಬಿಡಲಾಗಿತ್ತು. ಇದೀಗ ರಸ್ತೆಯಲ್ಲಿ ಕಂಕರ್ ಹಾಕಲಾಗುತ್ತಿದ್ದು, ಅತಿಕ್ರಮ ತೆರವುಗೊಳಿಸದೆ ಕಾಮಗಾರಿ ಆರಂಭಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಪ್ರಭಾವಿಗಳಿಗೆ ಮಣೆ

ಪಟ್ಟಣದ ಬಿ.ಬಿ. ನಗರ ಸೇರಿ ಕೆಲವೆಡೆ ರಸ್ತೆಗೆ ವ್ಯಾಪಿಸಿದ ಕಟ್ಟೆ, ಮೆಟ್ಟಿಲು ತೆರವುಗೊಳಿಸಲಾಗಿದೆ. ಇನ್ನೂ ಕೆಲವೆಡೆ ಮನೆ ಮುಂದಿನ ತೆಂಗಿನ ಮರಗಳನ್ನೂ ಕಡಿದು ಕಾಮಗಾರಿ ಮುಂದುವರಿಸಲಾಗಿದೆ. ಮರವನ್ನಾದರೂ ಉಳಿಸಿ ಎಂದು ಅಂಗಲಾಚಿದರೂ ಕೇಳದೆ ಕಾಮಗಾರಿ ಕೈಗೊಂಡ ಪುರಸಭೆ ಈ ರಸ್ತೆ ಸೇರಿದಂತೆ ಕೆಲವೆಡೆ ಪ್ರಭಾವಿಗಳಿಗೆ ಮಣೆ ಹಾಕುತ್ತಿದೆ. ಒಂದೇ ಊರಿನಲ್ಲಿ ಒಬ್ಬರಿಗೊಂದು ಮತ್ತೊಬ್ಬರಿಗೊಂದು ನ್ಯಾಯವೇ ಎಂದು ಹೆಸರು ಹೇಳಲಿಚ್ಚಿಸದ ನಿವಾಸಿಗಳು ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

==========

ಕೋಟ್

ರಸ್ತೆ ಅತಿಕ್ರಮ ತೆರವುಗಿಳಿಸಿದ ನಂತರ ಕಾಮಗಾರಿ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಗುವುದು. ಅಲ್ಲಿವರೆಗೆ ಯಾವುದೇ ಕಾರಣಕ್ಕೂ ಕಾಮಗಾರಿಗೆ ಅವಕಾಶ ನೀಡುವುದಿಲ್ಲ.

ಮಹಾಂತೇಶ ಕಲಬಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net