

ಕುಷ್ಟಗಿ: ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ ದೂರುಗಳು ಕೇಳಿಬರುತ್ತಿವೆ. ಸ್ಥಳ ಪರಿಶೀಲನೆ ಮಾಡಿದಾಗ ಸಾರ್ವಜನಿಕರ ದೂರಿಗೆ ಪುಷ್ಟಿ ನೀಡುವ ಅಂಶಗಳು ಕಂಡುಬಂದವು ಎಂದು ಜಿಪಂ ಸಿಇಒ ಫೌಜಿಯಾ ತರನ್ನುಮ್ ಹೇಳಿದರು.
ತಾಲೂಕಿನ ಹಿರೇಮನ್ನಿಗೋಳ, ಯಲಬುಣಚಿ, ದೊಣ್ಣೆಗುಡ್ಡ ಗ್ರಾಮಗಳಿಗೆ ಭೇಟಿ ನೀಡಿ ನರೇಗಾ ಹಾಗೂ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಜೆಜೆಎಂ ಯೋಜನೆಯ ಕಾಮಗಾರಿ ತೃಪ್ತಿಕರವಾಗಿಲ್ಲ ಎಂಬ ಕಾರಣಕ್ಕೆ ಕೆಲ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇತ್ತೀಚೆಗೆ ಯಲಬುರ್ಗಾ ತಾಲೂಕಿನಲ್ಲಿ ಜೆಜೆಎಂ ಕಾಮಗಾರಿಗೆ ಅಗೆದ ಗುಂಡಿಯಲ್ಲಿ ಬಿದ್ದು ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಬಹುತೇಕ ಕಡೆ ಗುಣಮಟ್ಟದ ಕಾಮಗಾರಿಯೂ ನಡೆದಿದೆ. ಸ್ಮಶಾನ ಅಭಿವೃದ್ಧಿ, ಘನ ತ್ಯಾಜ್ಯ ವಿಲೇವಾರಿ ಘಟಕ, ಶಾಲಾ ಕಾಂಪೌಂಡ್ ನಿರ್ಮಿಸಲಾಗುತ್ತಿದೆ ಎಂದರು. ತಾಪಂ ಇಒ ಜಯರಾಮ್ ಚವ್ಹಾಣ್, ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶ್ಯಾಮಣ್ಣ ನಾರಿನಾಳ ಇತರರಿದ್ದರು.