ಅಶ್ಲೀಲ ಫೋಟೋ ಕಳುಹಿಸಿದ್ದಕ್ಕೆ ಕೊಲೆ!

CRIME
ಭಾಗ್ಯಶ್ರೀ.
Published on

ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರದಲ್ಲಿ ನಡೆದ ಯುವಕ ಶರಣಪ್ಪ ಮಸ್ಕಿ ಕೊಲೆ ಪ್ರಕರಣ ಭೇದಿಸಿರುವ ಸ್ಥಳೀಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮೂಲದ ಭಾಗ್ಯಶ್ರೀ ಹನುಮಂತ ಡ್ರೋಣ್ ಹಾಗೂ ಇಬ್ರಾಹಿಂ ದರಸಾಬ ಎಲಿಗಾರ ಬಂಧಿತರು. ಅ.6ರಂದು ಆರೋಪಿತರನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸಿದಾಗ ಇಬ್ರಾಹಿಂನ ಜತೆಗೂಡಿ ಯುವಕನ ಕೊಲೆ ಮಾಡಿರುವುದಾಗಿ ಭಾಗ್ಯಶ್ರೀ ಒಪ್ಪಿಕೊಂಡಿದ್ದಾರೆ.

ಗ್ರಾಮದ ಯುವಕ ಶರಣಪ್ಪ ಮಸ್ಕಿ ಎಂಬಾತನನ್ನು ಸೆ.29ರ ತಡರಾತ್ರಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಮೃತನ ತಂದೆ ಶಿವಪ್ಪ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿ ಭಾಗ್ಯಶ್ರೀ ವಿವಾಹಿತೆಯಾಗಿದ್ದು, ಯುವಕನಿಗೆ ಆಕೆಯ ಪರಿಚಯ ಮೊದಲೇ ಇತ್ತು. ಆಕೆಯ ಆಶ್ಲೀಲ ಫೋಟೋಗಳನ್ನು ಮಾರ್ಕ್ ಮಾಡಿ ಮೊಬೈಲ್‌ಗೆ ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ಕುಪಿತಗೊಂಡು ಕೊಲೆ ಮಾಡಿರುವುದಾಗಿ ಭಾಗ್ಯಶ್ರೀ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆಂದು ಸಿಪಿಐ ಯಶವಂತ ಬಿಸನಳ್ಳಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್.ಹೇಮಂತ ಕುಮಾರ್ ಹಾಗೂ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲರ ಮಾರ್ಗದರ್ಶನದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಹನುಮಂತಪ್ಪ ತಳವಾರ ನೇತೃತ್ವದಲ್ಲಿ ರಚಿಸಲಾಗಿದ್ದ ತನಿಖಾ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ತಂಡಕ್ಕೆ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಬಹುಮಾನ ಘೋಷಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net