ರೆಡ್ಡಿ ಪಕ್ಷ ಬಿಜೆಪಿ ಮೇಲೆ ಪರಿಣಾಮ ಬೀರಲ್ಲ

11012023 kustagi bjp booth vijay
Published on

ಕುಷ್ಟಗಿ: ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿದರು. ತಾಲೂಕಿನ ಹಿರೇಮನ್ನಾಪುರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.

ಗಾಲಿ ಜನಾರ್ಧನರೆಡ್ಡಿ ಸ್ಥಾಪಿಸಿರುವ ಹೊಸ ಪಕ್ಷ ಗಂಗಾವತಿಯಲ್ಲಿ ಮಾತ್ರ ಕ್ರಿಯಾಶೀಲವಾಗಿದೆ. ಜನಾರ್ಧನರೆಡ್ಡಿ ಅಲ್ಲಿಂದಲೇ ಸ್ಪರ್ಧಿಸುತ್ತಿರುವುದರಿಂದ ಆ ಕ್ಷೇತ್ರದ ವಿವಿಧ ಪಕ್ಷಗಳ ಮೇಲೆ ಪರಿಣಾಮ ಬೀರಬಹುದು. ಜಿಲ್ಲೆಯ ಜನ ಜನಾರ್ಧನರೆಡ್ಡಿ ಅವರ ಹೆಸರು ಕೇಳಿದ್ದಾರೆಯೇ ವಿನಃ ಈ ವರೆಗೆ ಜಿಲ್ಲೆಯ ಜನರೊಂದಿಗೆ ಬೆರೆತಿಲ್ಲ ಎಂದ ಅವರು, ಜಿಲ್ಲೆಯಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೆಚ್ಚು ಜನ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ, ಅಭಿಯಾನದ ಜಿಲ್ಲಾ ಸಂಚಾಲಕ ಕೆ.ಮಹೇಶ ಮಾತನಾಡಿ, ಗ್ರಾಮಗಳನ್ನು ಪಕ್ಷದ ಶಕ್ತಿ ಕೇಂದ್ರಗಳೆಂದು ಗುರುತಿಸಿ ಬೂತ್ ಮಟ್ಟದ ಸಮಿತಿ ರಚಿಸಿ ಪ್ರಮುಖರನ್ನು ನೇಮಿಸಲಾಗಿದೆ. ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಮಹಿಳಾ ಘಟಕದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಪಾಟೀಲ್, ಗ್ರಾಪಂ ಸದಸ್ಯರಾದ ಶರಣಪ್ಪ ಬ್ಯಾಳಿ, ಪ್ಯಾಟೆಪ್ಪ ಸೂಡಿ, ಪ್ರಮುಖರಾದ ಶೈಲಜಾ ಬಾಗಲಿ, ರೇಣಮ್ಮ ವಂದಾಲಿ, ಬಸವರಾಜ ಬಿದರಕುಂದಿ, ಕಳಕಪ್ಪ ಪುರದ್, ಸಂಗಪ್ಪ ಕತ್ತಿ, ಕಳಕಪ್ಪ ಬಳೂಟಗಿ, ಮಹೇಶ ಬಿದರಕುಂದಿ, ಕಿರಣ್ ಹಡಪದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net